ನವದೆಹಲಿ: ಕೇರಳ ಸೇರಿದಂತೆ ದೇಶದಲ್ಲಿ ಮತ್ತೆ ಹಕ್ಕಿಜ್ವರ (ಏವಿಯನ್ ಇನ್ಫ್ಲುಯೆನ್ಸಾ) ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ನಡುವೆಯೇ, ಕೋಳಿ ಸಾಕಾಣಿಕೆ ಕ್ಷೇತ್ರವನ್ನು ರಕ್ಷಿಸಲು ಭಾರತ ಮಹತ್ವದ ಮೈಲಿಗಲ್ಲು ಸಾಧಿಸಿದೆ. ದೇಶದ ಮೊದಲ ಸ್ವದೇಶಿ ನಿರ್ಮಿತ ‘H5N1′(ಎಚ್5ಎನ್1) ಹಕ್ಕಿಜ್ವರ ನಿರೋಧಕ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಇದೇ 20ರಂದು ಮಧ್ಯಪ್ರದೇಶದ ಭೋಪಾಲ್ನಲ್ಲಿ ಈ ಲಸಿಕೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಸ್ವದೇಶಿ ಲಸಿಕೆಯ ವಿಶೇಷತೆ ಏನು?
ಭೋಪಾಲ್ನಲ್ಲಿರುವ ‘ಭಾರತೀಯ ಕೃಷಿ ಸಂಶೋಧನಾ ಮಂಡಳಿ-ರಾಷ್ಟ್ರೀಯ ಉನ್ನತ ಭದ್ರತಾ ಪ್ರಾಣಿ ರೋಗಗಳ ಸಂಸ್ಥೆ’ (ICAR-NIHSAD) ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಕೋಳಿಗಳಲ್ಲಿ ಕಾಣಿಸಿಕೊಳ್ಳುವ ಅಪಾಯಕಾರಿ ‘H5N1 ಕ್ಲೇಡ್ 2.3.2.1ಎ’ ವೈರಸ್ ತಳಿಯನ್ನು ಗುರಿಯಾಗಿಸಿಕೊಂಡು ಇದನ್ನು ತಯಾರಿಸಲಾಗಿದೆ. ಭಾರತದ ಸಂಶೋಧನಾ ಮತ್ತು ರೋಗ ಕಣ್ಗಾವಲು ವ್ಯವಸ್ಥೆಯಡಿ ಅಭಿವೃದ್ಧಿಗೊಂಡಿರುವ ಈ ಲಸಿಕೆಯು, ಸ್ಥಳೀಯವಾಗಿ ಹರಡುವ ವೈರಸ್ ತಳಿಗಳನ್ನು ಸಮರ್ಥವಾಗಿ ಎದುರಿಸಲು ದೇಶಕ್ಕೆ ಹೆಚ್ಚಿನ ಬಲ ನೀಡಲಿದೆ. ಆದರೆ, ಈ ಲಸಿಕೆ ವಾಣಿಜ್ಯಿಕವಾಗಿ ಯಾವಾಗ ಲಭ್ಯವಾಗಲಿದೆ, ಕೋಳಿ ಫಾರಂಗಳಿಗೆ ಇದನ್ನು ಹೇಗೆ ವಿತರಿಸಲಾಗುವುದು ಮತ್ತು ಲಸಿಕಾಕರಣದ ನಿಯಮಗಳೇನು ಎಂಬ ಕುರಿತು ಸರ್ಕಾರ ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ.
ತಮಿಳುನಾಡು, ಆಂಧ್ರ, ಕೇರಳದಲ್ಲಿ ಹೆಚ್ಚಿದ ಹಕ್ಕಿಜ್ವರದ ಆತಂಕ
ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಕ್ಕಿಜ್ವರದ ಅಬ್ಬರ ಮತ್ತೆ ಶುರುವಾಗಿರುವ ಹೊತ್ತಲ್ಲೇ ಈ ಲಸಿಕೆಯ ಘೋಷಣೆ ಹೊರಬಿದ್ದಿದೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಕೋಳಿ ಫಾರಂಗಳಲ್ಲಿ ಇದೇ ತಿಂಗಳಲ್ಲಿ ಹಠಾತ್ ಕೋಳಿಗಳ ಸಾವು ಸಂಭವಿಸಿದ್ದು, ಪರೀಕ್ಷೆಯಲ್ಲಿ H5N1 ಸೋಂಕು ದೃಢಪಟ್ಟಿದೆ. ನವೆಂಬರ್ 13ರವರೆಗೆ ಸೋಂಕಿತ ವಲಯದಲ್ಲಿ 35,647 ಹಕ್ಕಿಗಳು ಮೃತಪಟ್ಟಿವೆ. ರೋಗ ಹರಡುವುದನ್ನು ತಡೆಯಲು ಅಧಿಕಾರಿಗಳು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಿದ್ದು, ಸುಮಾರು 40,000 ಕೋಳಿಗಳನ್ನು ಸಾಮೂಹಿಕವಾಗಿ ನಾಶಪಡಿಸಿದ್ದಾರೆ. ಅತ್ತ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬುಕ್ಕರಾಯಸಮುದ್ರಂ ಮಂಡಲದ ಸಿದ್ದರಾಂಪುರಂ ಗ್ರಾಮದಲ್ಲೂ ಕಳೆದ ಅಕ್ಟೋಬರ್ನಲ್ಲಿ ಹಕ್ಕಿಜ್ವರ ಪತ್ತೆಯಾಗಿದ್ದು, ರಾಜ್ಯ ಸರ್ಕಾರ ಸೋಂಕಿತ ಮತ್ತು ಕಣ್ಗಾವಲು ವಲಯಗಳನ್ನು ಘೋಷಿಸಿ ಕೋಳಿ ಸಾಗಾಣಿಕೆಗೆ ನಿರ್ಬಂಧ ಹೇರಿದೆ. ಕೇರಳದಲ್ಲೂ 25000ಕ್ಕೂ ಅಧಿಕ ಪಕ್ಷಿಗಳನ್ನು ಹತ್ಯೆಗೈಯ್ಯುವ ಪ್ರಕ್ರಿಯೆ ಆರಂಭವಾಗಿದೆ.
ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ 2025-26ರ ವಾರ್ಷಿಕ ವರದಿಯ ಪ್ರಕಾರ, 2025ರಲ್ಲಿ ಕರ್ನಾಟಕ, ಮಹಾರಾಷ್ಟ್ರ, ಛತ್ತೀಸ್ಗಢ, ಜಾರ್ಖಂಡ್, ಆಂಧ್ರಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿತ್ತು.
ಹಕ್ಕಿಜ್ವರವು ಕೋಳಿ ಸಾಕಾಣಿಕೆದಾರರಿಗೆ ಭಾರಿ ಆರ್ಥಿಕ ನಷ್ಟವನ್ನುಂಟುಮಾಡುವುದಲ್ಲದೆ, ಸ್ಥಳೀಯ ಪೂರೈಕೆ ಸರಪಳಿಯನ್ನೂ ಅಸ್ತವ್ಯಸ್ತಗೊಳಿಸುತ್ತದೆ. ಇದುವರೆಗೆ ರೋಗ ಪತ್ತೆ, ಸೋಂಕಿತ ಹಕ್ಕಿಗಳ ನಾಶ ಮತ್ತು ಸಾಗಾಣಿಕೆ ನಿರ್ಬಂಧಗಳ ಮೂಲಕವೇ ಸೋಂಕನ್ನು ನಿಯಂತ್ರಿಸಲಾಗುತ್ತಿತ್ತು. ಈಗ ವೈಜ್ಞಾನಿಕ ಮೇಲ್ವಿಚಾರಣೆಯೊಂದಿಗೆ ಲಸಿಕಾಕರಣವನ್ನೂ ಅಳವಡಿಸಿಕೊಳ್ಳುವುದರಿಂದ ಕೋಳಿಗಳ ಮರಣ ಪ್ರಮಾಣವನ್ನು ತಗ್ಗಿಸಲು ಸಾಧ್ಯವಾಗಲಿದೆ.
ಇದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಸೋಂಕಿತ ಹಕ್ಕಿಗಳೊಂದಿಗೆ ನೇರ ಸಂಪರ್ಕಕ್ಕೆ ಬರುವ ಮನುಷ್ಯರಿಗೂ ಅಪರೂಪದ ಸಂದರ್ಭಗಳಲ್ಲಿ H5N1 ಸೋಂಕು ತಗುಲುವ ಸಾಧ್ಯತೆಯಿರುತ್ತದೆ. ಆದರೂ ಮನುಷ್ಯರಿಂದ ಮನುಷ್ಯರಿಗೆ ಈ ರೋಗ ಹರಡುವಿಕೆ ಇನ್ನೂ ದೃಢಪಟ್ಟಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರು ಅನಾರೋಗ್ಯಪೀಡಿತ ಅಥವಾ ಸತ್ತ ಹಕ್ಕಿಗಳನ್ನು ಬರಿಗೈಯಲ್ಲಿ ಮುಟ್ಟಬಾರದು ಹಾಗೂ ಅಸಹಜ ಸಾವು ಕಂಡುಬಂದಲ್ಲಿ ತಕ್ಷಣ ಪಶುವೈದ್ಯಕೀಯ ಇಲಾಖೆಗೆ ಮಾಹಿತಿ ನೀಡಬೇಕು. ಅಲ್ಲದೆ, ಮಾಂಸ ಮತ್ತು ಮೊಟ್ಟೆಗಳನ್ನು ಸ್ವಚ್ಛವಾಗಿ ನಿರ್ವಹಿಸಿ, ಚೆನ್ನಾಗಿ ಬೇಯಿಸಿ ಸೇವಿಸುವುದು ಸುರಕ್ಷಿತ ಎಂದು ತಜ್ಞರು ಸಲಹೆ ನೀಡಿದ್ದಾರೆ.



















