ಬೆಂಗಳೂರು : ನಮ್ಮ ಮೆಟ್ರೋ ಹಳದಿ ಮಾರ್ಗ ಇಂದು ಉದ್ಘಾಟನೆಗೊಳ್ಳುತ್ತಿದೆ. ಶೇ.80ರಷ್ಟು ಕರ್ನಾಟಕ ಸರ್ಕಾರವೇ ಅನುದಾನ ನೀಡಿದೆ. ಶೇ.20ರಷ್ಟು ಮಾತ್ರ ಕೇಂದ್ರ ಸರ್ಕಾರ ಅನುದಾನ ನೀಡಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವರದಿಗಾರರಿಗೆ ಪ್ರತಿಕ್ರಿಯಿಸಿದ ಡಿಕೆಶಿ, ಹಳದಿ ಮಾರ್ಗದ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರವೇ ಹಣ ನೀಡಿದೆ. ಭೂಸ್ವಾಧೀನಕ್ಕೆ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಶೇ.50ರಷ್ಟು ಹಣ ನೀಡಬೇಕಾಗಿತ್ತು. ಆದರೇ, ಕೇಂದ್ರ ಸರ್ಕಾರ ಅಷ್ಟು ಅನುದಾನ ನೀಡಿಲ್ಲ. ಬೆಂಗಳೂರಿನ ಅಭಿವೃದ್ಧಿಗಾಗಿ ನಮ್ಮ ಸರ್ಕಾರವೇ ಅನುದಾನ ನೀಡಿದೆ ಎಂದಿದ್ದಾರೆ.
ಬಿಜೆಪಿ ನಾಯಕರು ಸುಖಾಸುಮ್ಮನೆ ಆರೋಪ ಮಾಡುತ್ತಾರೆ. ಬಿಜೆಪಿಯ ಸಂಸದರು ರಾಜ್ಯದ ವಿಚಾರದಲ್ಲಾಗಲಿ, ಬೆಂಗಳೂರಿನ ಅಭಿವೃದ್ಧಿಗಾಗಿ ಯಾವದೇ ರೀತಿಯ ಅನುದಾನ ತಂದಿಲ್ಲ. ರಾಜ್ಯದ ಬಿಜೆಪಿಯ ಸಂಸದರಿಗೆ ನಾಚಿಕೆಯಿಲ್ಲ. ಕೇಂದ್ರ ಸರ್ಕಾರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಅವರು ಟೀಕಿಸಿದ್ದಾರೆ.
ಪ್ರಧಾನಿಗಳ ಮೇಲೆ ಗೌರವದಿಂದ ನಾವು ಅವರನ್ನು ಮೆಟ್ರೋ ಹಸಿರು ಮಾರ್ಗದ ಉದ್ಘಾಟನೆಗೆ ಆಹ್ವಾನಿಸಿದ್ದೇವೆ. 1 ಲಕ್ಷ ಕೋಟಿ ಅನುದಾನವನ್ನು ಬೆಂಗಳೂರು ಅಭಿವೃದ್ಧಿಗೆ ಅನುದಾನ ನೀಡುವಂತೆ ಇಂದು ನಾನು ನರೇಂದ್ರ ಮೋದಿ ಅವರಿಗೆ ಒತ್ತಾಯಿಸುತ್ತೇನೆ. ಕರ್ನಾಟಕ ಸರ್ಕಾರ ದೇಶದಲ್ಲಿ ಎರಡನೇ ಅತಿ ಹೆಚ್ಚು ತೆರಿಗೆಯ ಪಾಲನ್ನು ನೀಡುತ್ತಿದೆ. ಆದರೇ, ಕೇಂದ್ರ ಸರ್ಕಾರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. ಬೆಂಗಳೂರನ್ನು ರಾಷ್ಟ್ರೀಯ ರಾಜಧಾನಿಯಂತೆ ಪರಿಗಣಿಸಿ ಅನುದಾನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮೆಟ್ರೋಗೆ ಬುನಾದಿ ಹಾಕಿದ್ದು ಎಸ್.ಎಂ ಕೃಷ್ಣ, ಅಂದು ಕೇಂದ್ರದಲ್ಲಿ ಅಟಲ್ ವಾಜಪೇಯಿ ಅವರು ಪ್ರಧಾನಿಯಾಗಿದ್ದರು. ಮೆಟ್ರೋಗೆ ಮೋದಿ ಕೊಡುಗೆ ಏನಿದೆ ? ಎಂದು ಬಿಜೆಪಿ ಟೀಕೆಗೆ ತಿರುಗೇಟು ನೀಡಿದರು.



















