ಬೆಂಗಳೂರು : ಬೆಂಗಳೂರಿನ ನಡುರಸ್ತೆಯಲ್ಲೇ ಇಬ್ಬರು ಕಾರು ಚಾಲಕರ ನಡುವೆ ನಡೆದ ಜಗಳ ಹೊಡೆದಾಟಕ್ಕೆ ತಿರುಗಿದ ಘಟನೆ ಗುಂಜೂರು ಬಸ್ ನಿಲ್ದಾಣದ ಬಳಿ ನಡೆದಿದೆ. ಸಂಚಾರಿ ಪೊಲೀಸ್ ಎದುರಲ್ಲೇ ನಡೆದ ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಸ್ತೆ ಕಾಮಗಾರಿ ನಡೆಯುತ್ತಿದ್ದ ಕಾರಣ ವಾಹನ ಸಂಚಾರ ನಿಧಾನವಾಗಿದ್ದು, ಈ ವೇಳೆ ಎರಡು ಕಾರುಗಳು ಪರಸ್ಪರ ಟಚ್ ಆದ ಹಿನ್ನೆಲೆ ವಾಗ್ವಾದ ಶುರುವಾಗಿದೆ. ವಿವಾದ ಕ್ಷಣಾರ್ಧದಲ್ಲೇ ಉಗ್ರ ರೂಪ ಪಡೆದುಕೊಂಡು ಇಬ್ಬರು ಚಾಲಕರು ಎದೆಗೆ ಎದೆ ಉಬ್ಬಿಸಿ ಹೊಡೆದಾಟಕ್ಕೆ ಮುಂದಾಗಿದ್ದಾರೆ.
ಅಚ್ಚರಿಯ ವಿಷಯವೆಂದರೆ, ಪಕ್ಕದಲ್ಲೇ ಸಂಚಾರಿ ಪೊಲೀಸ್ ಇದ್ದರೂ ಕೂಡ ಇಬ್ಬರು ‘ಡೋಂಟ್ ಕೇರ್’ ಮನೋಭಾವದಿಂದ ಇಬ್ಬರು ಜಗಳ ಮುಂದುವರಿಸಿದ್ದಾರೆ.
ನಂತರ ಸ್ಥಳದಲ್ಲಿದ್ದ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ ಮಧ್ಯಪ್ರವೇಶ ಮಾಡಿ ಇಬ್ಬರನ್ನೂ ಶಾಂತಗೊಳಿಸಿದ್ದಾರೆ. ಸದ್ಯ ಈ ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ವೈಟ್‌ಫೀಲ್ಡ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಮುಂದಿನ 3 ದಿನ ಹೀಟ್‌ವೇವ್ – ಕರಾವಳಿ ಜನರಿಗೆ ಹವಾಮಾನ ಇಲಾಖೆ ಗಂಭೀರ ಎಚ್ಚರಿಕೆ!



















