ನವದೆಹಲಿ/ಒಟ್ಟಾವ : ಭಾರತ ಮತ್ತು ಕೆನಡಾ ನಡುವಿನ ಬಿಗುವಿನ ಸಂಬಂಧದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ. ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಅವಧಿಯಲ್ಲಿ ಭಾರತದ ಮೇಲೆ ಹೊರಿಸಲಾಗಿದ್ದ ‘ಗಂಭೀರ ಅಪರಾಧಗಳ’ ಆರೋಪಗಳಿಂದ ಈಗಿನ ಮಾರ್ಕ್ ಕಾರ್ನಿ ಸರ್ಕಾರ ಹಿಂದೆ ಸರಿದಿದೆ. ಕೆನಡಾದ ನೆಲದಲ್ಲಿ ನಡೆದ ಹಿಂಸಾತ್ಮಕ ಕೃತ್ಯಗಳಲ್ಲಿ ಭಾರತದ ಪಾತ್ರವಿಲ್ಲ ಎಂದು ಕಾರ್ನಿ ಸರ್ಕಾರ ಸ್ಪಷ್ಟಪಡಿಸಿದ್ದು, ಪ್ರಧಾನಿ ಮಾರ್ಕ್ ಕಾರ್ನಿ ಅವರ ಭಾರತ ಭೇಟಿಗೂ ಮುನ್ನ ಈ ಮಹತ್ವದ ಬೆಳವಣಿಗೆ ನಡೆದಿದೆ.
ಖಲಿಸ್ತಾನಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಸ್ಟಿನ್ ಟ್ರುಡೊ ಅವರು ಭಾರತದ ಮೇಲೆ ಮಾಡಿದ್ದ ಆರೋಪಗಳು ಉಭಯ ದೇಶಗಳ ಸಂಬಂಧವನ್ನು ಪಾತಾಳಕ್ಕೆ ತಳ್ಳಿದ್ದವು. ಆದರೆ, ಪ್ರಧಾನಿ ಮಾರ್ಕ್ ಕಾರ್ನಿ ಅವರು ಅಧಿಕಾರಕ್ಕೆ ಬಂದ ನಂತರ ಭಾರತದ ಜೊತೆಗಿನ ಸಂಬಂಧವನ್ನು ಹಳಿಗೆ ತರಲು ವಿಭಿನ್ನ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿದ್ದಾರೆ. ಭಾರತೀಯ ಏಜೆಂಟ್‌ಗಳಿಂದ ಕೆನಡಾದಲ್ಲಿ ದಮನಕಾರಿ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆತಂಕ ಈಗ ನಮಗಿಲ್ಲ ಎಂದು ಕೆನಡಾದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ವರ್ಷಗಳ ಕಾಲ ಇದ್ದ ರಾಜತಾಂತ್ರಿಕ ಬಿಕ್ಕಟ್ಟನ್ನು ಕೊನೆಗಾಣಿಸಲು ಕೆನಡಾ ಮುಂದಾಗಿದೆ.
ಭದ್ರತೆ, ಆರ್ಥಿಕ ಸಹಕಾರಕ್ಕೆ ಆದ್ಯತೆ
ಕೆನಡಾ ಮತ್ತು ಭಾರತ ನಡುವೆ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದಲ್ಲಿ ನಡೆದ ಮಾತುಕತೆಗಳು ಯಶಸ್ವಿಯಾಗಿದ್ದು, ಪರಸ್ಪರ ವಿಶ್ವಾಸ ವೃದ್ಧಿಯಾಗಿದೆ. “ಒಂದು ವೇಳೆ ಇಂತಹ ಚಟುವಟಿಕೆಗಳು ಮುಂದುವರಿಯುತ್ತಿದ್ದರೆ ನಾವು ಈ ಪ್ರವಾಸ ಕೈಗೊಳ್ಳಬೇಕಾದ ಅಗತ್ಯವೇ ಇರುತ್ತಿರಲಿಲ್ಲ” ಎಂದು ಕೆನಡಾದ ಅಧಿಕಾರಿಯೊಬ್ಬರು ಹೇಳಿರುವುದು ಪರಿಸ್ಥಿತಿ ಸುಧಾರಿಸಿರುವುದಕ್ಕೆ ಸಾಕ್ಷಿಯಾಗಿದೆ. ಅಮೆರಿಕದ ಜೊತೆಗಿನ ಅನಿಶ್ಚಿತ ಸಂಬಂಧಗಳ ನಡುವೆ, ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಜೊತೆ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳನ್ನು ವಿಸ್ತರಿಸುವುದು ಮಾರ್ಕ್ ಕಾರ್ನಿ ಅವರ ಉದ್ದೇಶವಾಗಿದೆ.
ಕಾರ್ನಿ ಭಾರತ ಪ್ರವಾಸ
ಪ್ರಧಾನಿ ಮಾರ್ಕ್ ಕಾರ್ನೆ ಅವರು ಒಂಬತ್ತು ದಿನಗಳ ಕಾಲ ಭಾರತ ಸೇರಿದಂತೆ ಆಸ್ಟ್ರೇಲಿಯಾ ಮತ್ತು ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಕೃತಕ ಬುದ್ಧಿಮತ್ತೆ (AI), ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಹೊಸ ಪಾಲುದಾರಿಕೆಗಳನ್ನು ಅನ್ವೇಷಿಸಲಿದ್ದಾರೆ. ಕೆನಡಾದಲ್ಲಿರುವ ಸಿಖ್ ಸಮುದಾಯದ ಕೆಲವು ಸಂಘಟನೆಗಳಿಂದ ಈ ಭೇಟಿಗೆ ಪ್ರತಿರೋಧ ವ್ಯಕ್ತವಾಗುತ್ತಿದ್ದರೂ, ಸಮುದಾಯದ ಸುರಕ್ಷತೆ ಮತ್ತು ಆರ್ಥಿಕ ಪ್ರಗತಿ ಎರಡನ್ನೂ ಒಟ್ಟಿಗೆ ನಿಭಾಯಿಸಲು ಸಾಧ್ಯವಿದೆ ಎಂದು ಕೆನಡಾ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.
ಇದನ್ನೂ ಓದಿ : ಉಡುಪಿ | ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ – ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು!


















