ಬಳ್ಳಾರಿ : ಜಿಲ್ಲೆಯ ಸಂಡೂರು ತಾಲೂಕಿನ ಸೋವಿನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಓ ಕಟ್ಟೆ ಬಸಪ್ಪ ವಿರುದ್ಧ 9 ಲೆವೆನ್ ಫಾರಂ ನೀಡುವ ವಿಚಾರದಲ್ಲಿ ಲಂಚ ಪಡೆದಿರುವ ಗಂಭೀರ ಆರೋಪ ಕೇಳಿಬಂದಿದೆ.
ಗ್ರಾಮದ ಶ್ರೀಧರ್ ಎಂಬುವರು, ಫಾರಂ ಕೊಡಿಸುವ ಹೆಸರಿನಲ್ಲಿ ಹಂತ ಹಂತವಾಗಿ ಸಾವಿರಾರು ರೂಪಾಯಿ ಹಣ ಪಡೆದರೂ ಕೆಲಸ ಮಾಡಿಕೊಡದೆ ಒಂದೂವರೆ ವರ್ಷಗಳಿಂದ ಅಲೆದಾಡುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಫೋನ್‌ಪೇ ಹಣ ವರ್ಗಾವಣೆ ವಿವರಗಳು ಮತ್ತು ವಿಡಿಯೋ, ಆಡಿಯೋ ಸಂಭಾಷಣೆ ವೈರಲ್ ಆಗಿದೆ.
ಶ್ರೀಧರ್ ಅವರ ಆರೋಪದ ಪ್ರಕಾರ, 2025ರ ಆಗಸ್ಟ್ 24ರಂದು ಪಿಡಿಓ ಖಾತೆಗೆ ₹3,000, 2026ರ ಜನವರಿ 5ರಂದು ₹2,300, ಅದೇ ದಿನ ಪಿಡಿಓ ಪತ್ನಿಯ ಫೋನ್‌ಪೇ ಖಾತೆಗೆ ₹7,000 ಹಾಗೂ 2026ರ ಫೆಬ್ರವರಿ 4ರಂದು ಪಿಡಿಓ ಖಾತೆಗೆ ₹5,000 ವರ್ಗಾವಣೆ ಮಾಡಲಾಗಿದೆ. ಇದಲ್ಲದೆ ₹5,000 ನಗದು ರೂಪದಲ್ಲಿಯೂ ನೀಡಿರುವುದಾಗಿ ಅವರು ಹೇಳಿದ್ದಾರೆ. ಹಣ ಪಡೆದರೂ 9 ಲೆವೆನ್ ಫಾರಂ ನೀಡದೆ ಸತಾಯಿಸಲಾಗಿದೆ ಎಂದು ಶ್ರೀಧರ್ ದೂರಿದ್ದಾರೆ.
ಇದೇ ವೇಳೆ, ಮತ್ತೊಬ್ಬ ವ್ಯಕ್ತಿಯಿಂದಲೂ ಇದೇ ರೀತಿಯಲ್ಲಿ ಹಣ ಪಡೆದಿರುವ ಆರೋಪವೂ ಕೇಳಿಬಂದಿದೆ. ಫೋನ್‌ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು, ಪತ್ನಿಯ ಖಾತೆಗೆ ಹಣ ಹಾಕಿಸಿರುವುದು ಸೇರಿದಂತೆ ಹಲವು ವಿಚಾರಗಳು ಆಡಿಯೋ ಸಂಭಾಷಣೆಯಲ್ಲಿದೆ.
ಸುಮಾರು ಒಂದೂವರೆ ವರ್ಷಗಳಿಂದ ಸರ್ಕಾರಿ ಕಚೇರಿಗೆ ಅಲೆದಾಡಿ, ಹಣ ನೀಡಿದ ಬಳಿಕವೂ ಕೆಲಸ ಆಗದಿರುವುದರಿಂದ ಬೇಸತ್ತ ಶ್ರೀಧರ್, ಈ ವಿಚಾರವನ್ನು ಇದೀಗ ಸಾರ್ವಜನಿಕರ ಮುಂದಿಟ್ಟಿದ್ದಾರೆ. ಸಾರ್ವಜನಿಕರ ಕೆಲಸ ಮಾಡಲು ಇರುವ ಅಧಿಕಾರಿಗಳು ಲಂಚ ಕೇಳಿದರೆ ಸಾಮಾನ್ಯ ಜನರು ನ್ಯಾಯಕ್ಕಾಗಿ ಯಾರನ್ನು ಸಂಪರ್ಕಿಸಬೇಕು ಎಂಬ ಪ್ರಶ್ನೆಯೂ ಈ ಪ್ರಕರಣದಿಂದ ಉದ್ಭವಿಸಿದೆ. ಪಿಡಿಓ ಕಟ್ಟೆ ಬಸಪ್ಪ ವಿರುದ್ಧ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡುಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ತಕ್ಷಣ ಅಮಾನತು ಮಾಡಬೇಕು ಎಂದು ಶ್ರೀಧರ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕೆಂಗೇರಿ ARO ಕಚೇರಿಯ ಮತ್ತಷ್ಟು ಅಕ್ರಮಗಳು ಬಯಲು – ಲೋಕಾಯುಕ್ತಕ್ಕೆ ಎನ್.ಆರ್ ರಮೇಶ್ ದೂರು!


















