ವಿಜಯನಗರ : ತುಂಗಭದ್ರಾ ನದಿಯಲ್ಲಿ ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ವಿಜಯನಗರ-ಕೊಪ್ಪಳ ಜಿಲ್ಲೆಗಳ ಗಡಿಭಾಗದಲ್ಲಿ ನಡೆದಿದೆ.
ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ಗಡಿಭಾಗದಲ್ಲಿರುವ ಬುಕ್‌ಸಾಗರ ಸೇತುವೆ ಸಮೀಪ ನದಿಯಲ್ಲಿ ಶವ ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಗಂಗಾವತಿ ಹಾಗೂ ಕಮಲಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿದ್ದಾರೆ.
ಆದರೆ, ಶವ ಪತ್ತೆಯಾದ ಸ್ಥಳ ತಮ್ಮ ಠಾಣಾ ವ್ಯಾಪ್ತಿಗೆ ಸೇರಿಲ್ಲ ಎಂದು ಎರಡೂ ಠಾಣೆಗಳ ಸಿಬ್ಬಂದಿ ವಾದ ಮಂಡಿಸಿದ್ದರಿಂದ ಕೆಲಕಾಲ ಸ್ಥಳಾಧಿಕಾರದ ಕುರಿತು ಗೊಂದಲ ಮತ್ತು ವಾಗ್ವಾದ ಉಂಟಾಯಿತು ಎನ್ನಲಾಗಿದೆ. ಈ ನಡುವೆಯೇ ಶವ ತೇಲುತ್ತಿದ್ದ ಪ್ರದೇಶದ ಸಮೀಪ ಮೊಸಳೆ ಕಾಣಿಸಿಕೊಂಡಿದೆ.
ಶವವನ್ನು ಹೊರತೆಗೆಯಲು ಎರಡು ಠಾಣೆಗಳ ಪೊಲೀಸರು ಹರಸಾಹಸ ಪಡಬೇಕಾಯಿತು. ಬಳಿಕ ಸ್ಥಳೀಯ ಮೀನುಗಾರರ ಸಹಾಯದಿಂದ ಕಾರ್ಯಾಚರಣೆ ನಡೆಸಿ ಶವವನ್ನು ನದಿಯಿಂದ ಹೊರತೆಗೆಯಲಾಗಿದೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮೃತನ ಗುರುತು ಹಾಗೂ ಸಾವಿನ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಪಾಕ್ ವ್ಯಕ್ತಿಯ ಜೊತೆ ಸಂಪರ್ಕ ಹೊಂದಿದ್ದ ಇಬ್ಬರ ಬಂಧನ!


















