ಬೆಂಗಳೂರು : ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಪ್ರತಿ ತಿಂಗಳು ಬಾಕಿ ಬಿಲ್ ಪಾವತಿಸುವುದು ಸವಾಲು. ಶಾಪಿಂಗ್ ಮಾಡುವಾಗಲೋ, ಯಾವುದೋ ವಸ್ತುಗಳನ್ನು ಖರೀದಿಸುವಾಗಲೋ, ಕ್ರೆಡಿಟ್ ಕಾರ್ಡ್ ಇದೆಯಲ್ಲ ಎಂದು ಹೆಚ್ಚಿನ ವೆಚ್ಚ ಮಾಡುತ್ತಾರೆ. ಆದರೆ, ಡ್ಯೂ ಡೇಟ್ ದಿನ ಬಿಲ್ ಪಾವತಿಸಲು ಪರದಾಡುತ್ತಾರೆ. ಇನ್ನೂ ಹೆಚ್ಚಿನ ಜನ ವಿಳಂಬ ಪಾವತಿಗೆ ಹೆಚ್ಚಿನ ಶುಲ್ಕವನ್ನೂ ಪಾವತಿಸುತ್ತಾರೆ. ಆದರೆ, ಇದನ್ನು ತಪ್ಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮ ಜಾರಿಗೆ ತರುತ್ತಿದೆ.
ಹೌದು.. ಡ್ಯೂ ಡೇಟ್ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಬೇಕಾದ ದಿನ ಗ್ರಾಹಕರು ಬಿಲ್ ಪಾವತಿಸದಿದ್ದರೆ, ಮೂರು ದಿನಗಳ ಹೆಚ್ಚುವರಿ ಕಾಲಾವಕಾಶ ಕೊಡಬೇಕು ಎಂಬ ನಿಯಮವನ್ನು ಆರ್ ಬಿಐ ಜಾರಿಗೆ ತರುತ್ತಿದೆ. ಹೊಸ ನಿಯಮ ಜಾರಿಯಾದರೆ, ಡ್ಯೂ ಡೇಟ್ ಗಿಂತ ಹೆಚ್ಚಿನ ಅವಧಿ ಸಿಗಲಿದೆ. ಇದಕ್ಕೆ ಯಾವುದೇ ದಂಡವೂ ಇರುವುದಿಲ್ಲ ಎಂದು ಆರ್ ಬಿಐ ತಿಳಿಸಿದೆ.
ಒಂದು ವೇಳೆ ನೀವು ನಿಗದಿತ ದಿನಾಂಕದೊಳಗೆ ಬಿಲ್ ಪಾವತಿಸಲು ಮರೆತರೆ ಅಥವಾ ಆಗದಿದ್ದರೆ, ಆ ದಿನಾಂಕ ಮುಗಿದ ನಂತರವೂ ನಿಮಗೆ 3 ದಿನಗಳವರೆಗೆ ಅವಕಾಶ ಇರುತ್ತದೆ. ಈ 3 ದಿನಗಳ ಒಳಗೆ ನೀವು ಬಿಲ್ ಪಾವತಿಸಿದರೆ ಯಾವುದೇ ವಿಳಂಬ ಶುಲ್ಕ (Late Payment Fee) ವಿಧಿಸುವುದಿಲ್ಲ. ಹಾಗೆಯೇ, ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ.
ಹಳೆಯ ನಿಯಮದಂತೆ, ನೀವು ಸ್ವಲ್ಪ ಮೊತ್ತ ಬಾಕಿ ಉಳಿಸಿಕೊಂಡರೂ ಸಂಪೂರ್ಣ ಬಿಲ್ ಮೊತ್ತದ ಮೇಲೆ ದಂಡ ವಿಧಿಸಲಾಗುತ್ತಿತ್ತು. ಆದರೆ ಹೊಸ ನಿಯಮದಂತೆ, ದಂಡ ಅಥವಾ ವಿಳಂಬ ಶುಲ್ಕವನ್ನು ಕೇವಲ ಬಾಕಿ ಉಳಿದಿರುವ ಮೊತ್ತದ (Outstanding Amount) ಮೇಲೆ ಮಾತ್ರ ವಿಧಿಸಬೇಕು, ಒಟ್ಟು ಬಿಲ್ ಮೊತ್ತದ ಮೇಲಲ್ಲ ಎಂದು ಆರ್ ಬಿಐ ತಿಳಿಸಿದೆ.
ಬ್ಯಾಂಕುಗಳು ನಿಮ್ಮ ಬಿಲ್ ಬಾಕಿ ಇದೆ ಎಂದು ಕ್ರೆಡಿಟ್ ಮಾಹಿತಿ ಕಂಪನಿಗಳಿಗೆ (CICs) ವರದಿ ಮಾಡುವ ಮೊದಲು ಈ 3 ದಿನಗಳ ಕಾಲ ಕಾಯಲೇಬೇಕು. ಇದರಿಂದ ನಿಮ್ಮ ಕ್ರೆಡಿಟ್ ಇತಿಹಾಸ ಹಾಳಾಗುವುದಿಲ್ಲ. ಈ 3 ದಿನಗಳ ಸವಲತ್ತು ಸಿಗುತ್ತದೆ ಎಂದು ಯಾವಾಗಲೂ ತಡವಾಗಿ ಪಾವತಿಸಬೇಡಿ. ಇದು ಕೇವಲ ತುರ್ತು ಸಂದರ್ಭದಲ್ಲಿ ಅಥವಾ ಮರೆತಾಗ ಬಳಸಿಕೊಳ್ಳಲು ಇರುವ ಅವಕಾಶವಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲಷ್ಟೇ ಬಳಸಬಹುದು.
ಇದನ್ನೂ ಓದಿ : ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಗೆ ಆ್ಯಸಿಡ್ ದಾಳಿ ಬೆದರಿಕೆ!



















