ಬೆಳಗಾವಿ: ಸರ್ಕಾರಿ ಶಾಲೆಯ ಮಧ್ಯಾಹ್ನದ ಬಿಸಿಯೂಟ ಯೋಜನೆಯ ನಗದು ಪುಸ್ತಕವನ್ನು ಪರಿಶೀಲಿಸಿ ವಾಪಸ್ ನೀಡಲು ಶಿಕ್ಷಕರೊಬ್ಬರಿಂದ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಹುಕ್ಕೇರಿ ತಾಲೂಕು ಪಂಚಾಯಿತಿಯ ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತ ಆರೋಪಿತ ಅಧಿಕಾರಿಯನ್ನು 41 ವರ್ಷದ ಸವಿತಾ ಪರಪ್ಪ ಹಲಕಿ ಎಂದು ಗುರುತಿಸಲಾಗಿದ್ದು, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮದ ರವಿರಾಜ್ ಸರ್ಕಾರಿ ಪ್ರೌಢಶಾಲೆಯ 53 ವರ್ಷದ ಶಿಕ್ಷಕ ಪರಶುರಾಮ ಮಹಾದೇವ ಹಜ್ಜೆ ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಶಿಪ್ಪೂರ ಆರ್‌ಎಂಎಸ್‌ಎ (RMSA) ಪ್ರೌಢಶಾಲೆಯ ಮಧ್ಯಾಹ್ನದ ಬಿಸಿಯೂಟ ಅಂದರೆ ಅಕ್ಷರ ದಾಸೋಹ ಯೋಜನೆಗೆ ಸಂಬಂಧಿಸಿದ ನಗದು ಪುಸ್ತಕವನ್ನು (Cash Book) ಪರಿಶೀಲನೆಗಾಗಿ ಹುಕ್ಕೇರಿ ತಾಲೂಕು ಪಂಚಾಯಿತಿ ಕಚೇರಿಯ ಅಕ್ಷರ ದಾಸೋಹ ವಿಭಾಗಕ್ಕೆ ಸಲ್ಲಿಸಲಾಗಿತ್ತು. ಈ ನಗದು ಪುಸ್ತಕವನ್ನು ಪರಿಶೀಲಿಸಿ ನಿಯಮಾನುಸಾರ ದೂರುದಾರ ಶಿಕ್ಷಕರಿಗೆ ವಾಪಸ್ ನೀಡಬೇಕಾಗಿತ್ತು. ಆದರೆ, ಈ ಕಡತ ವಿಲೇವಾರಿ ಮಾಡಿ ನಗದು ಪುಸ್ತಕವನ್ನು ಮರಳಿಸಲು ಸಹಾಯಕ ನಿರ್ದೇಶಕಿ ಸವಿತಾ ಪರಪ್ಪ ಹಲಕಿ ಅವರು ಶಿಕ್ಷಕ ಪರಶುರಾಮ ಹಜ್ಜೆ ಅವರಿಗೆ 15,000 ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಲಂಚಕ್ಕೆ ಬೇಡಿಕೆ ಮತ್ತು ಲೋಕಾಯುಕ್ತ ಕಾರ್ಯಾಚರಣೆ
ತಮ್ಮ ಕಚೇರಿ ಕೆಲಸಕ್ಕೆ ಲಂಚ ನೀಡಲು ಇಚ್ಛಿಸದ ಶಿಕ್ಷಕ ಪರಶುರಾಮ ಹಜ್ಜೆ ಅವರು ನೇರವಾಗಿ ಬೆಳಗಾವಿ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ ಅಧಿಕೃತವಾಗಿ ದೂರು ದಾಖಲಿಸಿದ್ದರು. ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಬೆಳಗಾವಿ ಲೋಕಾಯುಕ್ತ ಪೊಲೀಸರು, ಆರೋಪಿತ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಬಲೆ ಬೀಸಿದ್ದರು. ಅದರಂತೆ, ದೂರುದಾರ ಶಿಕ್ಷಕರಿಂದ 15,000 ರೂಪಾಯಿ ಲಂಚದ ಹಣವನ್ನು ಆರೋಪಿತ ಅಧಿಕಾರಿ ಸವಿತಾ ಪರಪ್ಪ ಹಲಕಿ ಅವರು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ತಂಡವು ದಿಢೀರ್ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದೆ. ಆರೋಪಿಯಿಂದ 15,000 ರೂಪಾಯಿ ಲಂಚದ ನಗದು ಹಣವನ್ನು ಸಾಕ್ಷ್ಯ ಸಮೇತ ಜಪ್ತಿ ಮಾಡಲಾಗಿದೆ.
ಪೊಲೀಸ್ ತಂಡ ಮತ್ತು ಮುಂದಿನ ತನಿಖೆ
ಈ ಯಶಸ್ವಿ ಕಾರ್ಯಾಚರಣೆಯನ್ನು ಬೆಳಗಾವಿ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ವೆಂಕಟೇಶ್ ಯಡಹಳ್ಳಿ (ಪಿಐ-03) ಅವರ ನೇತೃತ್ವದಲ್ಲಿ ನಡೆಸಲಾಗಿದ್ದು, ಪೊಲೀಸ್ ಇನ್‌ಸ್ಪೆಕ್ಟರ್ ಸಂಗಮೇಶ್ ಹೊಸಮನಿ (ಪಿಐ-05) ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸಾಥ್ ನೀಡಿದ್ದರು. ಘಟನೆಗೆ ಸಂಬಂಧಿಸಿದಂತೆ ಬೆಳಗಾವಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 (ತಿದ್ದುಪಡಿ 2018) ರ ಕಲಂ 7(ಎ) ಅಡಿಯಲ್ಲಿ (ಅಪರಾಧ ಸಂಖ್ಯೆ: 14/2026) ಪ್ರಕರಣ ದಾಖಲಾಗಿದೆ. ಆರೋಪಿತ ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.


















