ಮೈಸೂರು : ಅರಣ್ಯ ಪ್ರದೇಶದಲ್ಲಿ ಕಿರು ಅರಣ್ಯ ಉತ್ಪನ್ನ ಸಂಗ್ರಹಿಸಲು ತೆರಳಿದ್ದ ಆದಿವಾಸಿಗಳ ಗುಂಪಿನ ಮೇಲೆ ಕರಡಿ ಹಠಾತ್ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬಳ್ಳೆ ಸಮೀಪ ನಡೆದಿದೆ.
ಗಾಯಾಳುವನ್ನು ಒಳ್ಳೆ ಹಾಡಿ ನಿವಾಸಿ ಉಪೇಂದ್ರ ಎಂದು ಗುರುತಿಸಲಾಗಿದೆ. ಅವರು ಬಳ್ಳೆ ಹಾಡಿ ಸಮೀಪದ ವಡಕನ ಮಾಳ ಪ್ರದೇಶದಲ್ಲಿ ಇತರ ಆದಿವಾಸಿಗಳೊಂದಿಗೆ ಕಿರು ಅರಣ್ಯ ಉತ್ಪನ್ನ ಸಂಗ್ರಹಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಹಠಾತ್‌ವಾಗಿ ಬಂದ ಕರಡಿ ಆದಿವಾಸಿಗಳ ಗುಂಪಿನ ಮೇಲೆ ದಾಳಿ ನಡೆಸಿದ ಪರಿಣಾಮ ಎಲ್ಲರೂ ಚದುರಿ ಓಡಿದ್ದಾರೆ. ಈ ವೇಳೆ ಉಪೇಂದ್ರ ಕರಡಿಯ ದಾಳಿಗೆ ಸಿಲುಕಿದ್ದು, ಅವರ ಮುಖ, ತಲೆ, ಕೈ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿವೆ.
ಉಪೇಂದ್ರ ಅವರ ಕಿರುಚಾಟ ಕೇಳಿ ಸ್ಥಳದಲ್ಲಿದ್ದ ಇತರ ಆದಿವಾಸಿಗಳು ಧಾವಿಸಿ, ಗದ್ದಲ ಮಾಡಿ ಕರಡಿಯನ್ನು ಓಡಿಸಿದ್ದಾರೆ. ಬಳಿಕ ಗಾಯಾಳುವಿಗೆ ಪ್ರಾಥಮಿಕ ನೆರವು ನೀಡಿ ಅರಣ್ಯ ಇಲಾಖೆ ಸಿಬ್ಬಂದಿಯ ಸಹಾಯದಿಂದ ಆಸ್ಪತ್ರೆಗೆ ಸಾಗಿಸಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಉಪೇಂದ್ರ ಅವರನ್ನು ಸರಗೂರಿನ ವಿವೇಕಾನಂದ ಯೂತ್ ಮೂವ್‌ಮೆಂಟ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಲಂಚ ಸ್ವೀಕರಿಸುತ್ತಿದ್ದ ವೇಳೆ ಜಿಬಿಎ AEE ಸೇರಿ ಮೂವರು ‘ಲೋಕಾ’ ಬಲೆಗೆ!


















