ಆಪರೇಷನ್ ಸಿಂಧೂರ್…ಭಾರತೀಯ ಸೇನೆಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರದಿಡಬಹುದಾದ ಅದ್ಬುತ ಅಧ್ಯಾಯ. ಪಹಲ್ಗಾಮ್ ನಲ್ಲಿ 26 ಭಾರತೀಯರ ಹತ್ಯೆಗೆ ಪ್ರತೀಕಾರವಾಗಿ ನಡೆದ ಅತ್ಯಂತ ಸಂಘಟಿತ ಮತ್ತು ಅಷ್ಟೇ ಯಶಸ್ವಿ ಕಾರ್ಯಾಚರಣೆ ಅಂದರೆ ಅದು ಆಪರೇಷನ್ ಸಿಂಧೂರ್. ಪಾಕಿಸ್ತಾನದ ಒಳಗೆ ಹೊಕ್ಕು ಆರ್ಭಟಿಸಿದ ಭಾರತೀಯ ಸೇನೆಗೆ ವಾಯುಪಡೆ ನೂರಾನೆ ಬಲ ನೀಡಿತ್ತು. ಇದರೊಟ್ಟಿಗೆ ಬ್ರಹ್ಮೋಸ್ ಕ್ಷಿಪಣಿಯೂ ತನ್ನ ಜಂಗಾಬಲವನ್ನ ಪ್ರದರ್ಶಿಸಿತ್ತು. ಆದರೀಗ ಮತ್ತೊಂದು ಕುತೂಹಲಕಾರಿ ಮತ್ತು ಅಚ್ಚರಿಯ ವಿಷಯವೊಂದು ಬೆಳಕಿಗೆ ಬಂದಿದೆ. ಆಪರೇಷನ್ ಸಿಂಧೂರ್ ನಲ್ಲಿ ಭಾರತೀಯ ಸೇನೆಯ ಟ್ಯಾಂಕರ್ ರೆಜಿಮೆಂಟ್ ಕೂಡಾ ಭಾಗಿಯಾಗಿತ್ತು.
ಪಿಒಕೆ ಉಗ್ರ ನೆಲೆಗಳನ್ನು ಉಡಾಯಿಸಿದ್ದು ಟಿ72
ನಿಜಕ್ಕೂ ಇದು ಭಾರತೀಯ ಸೇನೆಯ ಹಿರಿಮೆ. ಆಪರೇಷನ್ ಸಿಂಧೂರಕ್ಕೆ ಅಂದು ಭೀಮ ಬಲ ನೀಡಿದ್ದು ಟಿ72 ಟ್ಯಾಂಕರ್. ಭಾರತ-ಪಾಕ್ ಗಡಿಯಲ್ಲಿ ಪಹರೆಗೆ ನಿಂತಿದ್ದ ಈ ಬಲಭೀಮ ಟಿ72. ಪಾಕ್ ಆಕ್ರಮಿತ ಕಾಶ್ಮೀರದ ಉಗ್ರನೆಲೆಗಳನ್ನು ಒಂದೊಂದಾಗಿ ಚಿಂದಿ ಉಡಾಯಿಸಿತ್ತು. ಉಗ್ರರು ರೂಪಿಸಿಕೊಂಡಿದ್ದ ಬಂಕರ್ ಗಳು, ಭಾರತದೊಳಗೆ ನುಸುಳಲು ಬಳಕೆ ಮಾಡುತ್ತಿದ್ದ ಕಳ್ಳದಾರಿಗಳು, ತರಬೇತಿ ಶಿಬಿರಗಳು ಹೀಗೆ ಎಲ್ಲವನ್ನೂ ಸುಟ್ಟು ಬೂದಿಯಾಗಿಸಿದ್ದೇ ಈ ಟಿ 72 ಟ್ಯಾಂಕರ್ ಅಂತಾ ಖುದ್ದು ಭಾರತೀಯ ಸೇನೆ ಇದೀಗ ಸ್ಪಷ್ಟನೆ ನೀಡಿದೆ.
ರಷ್ಯಾ ದೇಶದ ಹೆಮ್ಮೆಯ ಕೊಡುಗೆ ಈ ಟಿ 72
1973ರಲ್ಲಿ ಅಂದಿನ ಸೋವಿಯತ್ ಒಕ್ಕೂಟದ ಹೆಮ್ಮೆಯ ಹೆಗ್ಗುರುತೇ ಈ ಟಿ 72 ಟ್ಯಾಂಕ್. ಅತ್ಯಂತ ನಿಖರ ಗುರಿಯ ಈ ಟ್ಯಾಂಕರ್ ಗಳನ್ನು ಭಾರತ ರಷ್ಯಾದಿಂದ ಖರೀದಿ ಮಾಡಿದೆ. ಮೊನ್ನೆ ಪಿಒಕೆ ಮೇಲೆ ದಾಳಿ ಮಾಡಿದ ಟಿ 72 ಟ್ಯಾಂಕರ್ ಗಳಲ್ಲಿ 125 ಎಂಎಂ ಗನ್ ಗಳು ಮತ್ತು 4 ಸಾವಿರ ಮೀಟರ್ ರೇಂಜಿನ ಕ್ಷಿಪಣಿಗಳನ್ನು ಅಳವಡಿಸಲಾಗಿತ್ತು. ಈ ಟಿ 72 ಮೂಲಕ ಸಿಡಿದ ಗುಂಡು ಮತ್ತು ಕ್ಷಿಪಣಿಗಳೇ ಲಕ್ಷರ್, ಜೈಷ್ ಸಂಘಟನೆ ಅಡ್ಡೆಗಳನ್ನ ಛಿದ್ರಗೊಳಿಸಿದ್ದು. ಇಂದು ಭಾರತೀಯ ಸೇನೆ ಬತ್ತಳಿಕೆಯಲ್ಲಿ ಇಂಥಾ 2418 ಟಿ 72 ಟ್ಯಾಂಕರ್ ಗಳಿವೆ.
ಪಾಕ್ ಅಣ್ವಸ್ತ್ರ ಬಲದ ಕ್ಷಿಪಣಿ ನಾಶವಾಗಿದ್ದು ಹೇಗೆ…?
ಆಪರೇಷನ್ ಸಿಂಧೂರ್ ವಿರುದ್ಧ ತಿರುಗಿ ಬಿದ್ದಿದ್ದ ಪಾಕಿಸ್ತಾನ ಭಾರತದ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿಗೆ ಮುಂದಾಗಿತ್ತು. ಅದರಲ್ಲೂ ಅಣ್ವಸ್ತ್ರ ಸಿಡಿತಲೆಯನ್ನೇ ಹೊತ್ತು ಸಾಗುವ ತಾಕತ್ತಿನ ಅಸ್ತ್ರವನ್ನೇ ಪಾಕ್ ಅಂದು ಭಾರತದ ಮೇಲೆ ಪ್ರಯೋಗಿಸಿತ್ತು. ಹೌದು ಪಾಕಿಸ್ತಾನ ಭಾರತದ ವಿರುದ್ಧ ಅತ್ಯಂತ ಶಕ್ತಿಶಾಲಿ ಶಾಹೀನ್ ಕ್ಷಿಪಣಿಯನ್ನು ಭಾರತದ ವಿರುದ್ಧ ಪ್ರಯೋಗಿಸಿತ್ತು. ಭಾರತದ ವಾಯು ರಕ್ಷಣಾ ವ್ಯವಸ್ಥೆಯಾದ ಎಸ್ 400 ಈ ಶಾಹೀನ್ ಅಸ್ತ್ರವನ್ನ ಬಾನಿನಲ್ಲೇ ತಡೆದಿತ್ತು. ಭಾರತದ ಸುದರ್ಶನ ಚಕ್ರ ಅಂತಲೇ ಕರೆಯಿಸಿಕೊಳ್ಳುವ ಈ ಎಸ್ 400 ಪಾಕಿಸ್ತಾನದಿಂದ ಹಾರಿ ಬಂದಿದ್ದ ಶಾಹೀನ್ ಕ್ಷಿಪಣಿಯನ್ನು ಕ್ಷಣಾರ್ಧದಲ್ಲಿ ಬಾನಲ್ಲೇ ಚಿಂದಿ ಉಡಾಯಿಸಿತ್ತು. ಈ ಮೂಲಕ ಪಾಕಿಸ್ತಾನದ ಪ್ರಬಲ ಅಸ್ತ್ರವನ್ನೇ ಭಾರತ ಬಾನಿನಲ್ಲೇ ಸುಟ್ಟು ಹಾಕಿತ್ತು. ಅಷ್ಟೇ ಅಲ್ಲಾ ಪ್ರತೀಕಾರದ ಸಂಚು ರೂಪಿಸಿದ್ದ ಪರಮಪಾಪಿಗಳನ್ನುಮಕಾಡೆ ಮಲಗಿಸಿತ್ತು.



















