ಚೆನ್ನೈ : ತಮಿಳುನಾಡು ಬಿಜೆಪಿಗೆ ಸರಣಿ ಆಘಾತ ಎದುರಾಗುತ್ತಿದ್ದು, ಪಕ್ಷದಲ್ಲಿ ರಾಜೀನಾಮೆ ಪರ್ವ ಮುಂದುವರಿದಿದೆ. ಪಕ್ಷದ ಪ್ರಮುಖ ನಾಯಕಿ ಹಾಗೂ ರಾಜ್ಯ ಕಾರ್ಯದರ್ಶಿ ಸುಮತಿ ವೆಂಕಟೇಶ್ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಮತ್ತು ರಾಜ್ಯ ಉಪಾಧ್ಯಕ್ಷ ಕರು ನಾಗರಾಜನ್ ಅವರ ನಿರ್ಗಮನದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ತಮಿಳುನಾಡು ಬಿಜೆಪಿಗೆ ಇದು ಮೂರನೇ ದೊಡ್ಡ ಆಘಾತವಾಗಿದೆ.
ತಮ್ಮ ರಾಜೀನಾಮೆ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಸುಮತಿ ವೆಂಕಟೇಶ್ ಅವರು ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. “ಭಾರವಾದ ಹೃದಯದಿಂದ, ದುಃಖದಿಂದ ನಾನು ತಮಿಳುನಾಡು ಬಿಜೆಪಿಯ ರಾಜ್ಯ ಕಾರ್ಯದರ್ಶಿ ಜವಾಬ್ದಾರಿಯಿಂದ ಕೆಳಗಿಳಿಯಲು ಮತ್ತು ಪಕ್ಷದೊಂದಿಗಿನ ನನ್ನ ಒಡನಾಟವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇನೆ. ಪಕ್ಷದಲ್ಲಿ ಸೇವೆ ಸಲ್ಲಿಸಿದ್ದು ನನಗೆ ಹೆಮ್ಮೆಯ ವಿಷಯವಾಗಿತ್ತು. ಈ ನಿರ್ಧಾರವನ್ನು ನಾನು ಸಾಕಷ್ಟು ಆಲೋಚಿಸಿದ ನಂತರವೇ ತೆಗೆದುಕೊಂಡಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ಮೋದಿ ನಾಯಕತ್ವಕ್ಕೆ ಪ್ರಶಂಸೆ
ಪಕ್ಷವನ್ನು ತೊರೆದರೂ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಬಿಜೆಪಿಯ ರಾಷ್ಟ್ರೀಯತೆಯ ಸಿದ್ಧಾಂತಗಳ ಬಗ್ಗೆ ತಮಗೆ ಗೌರವ ಇದೆ ಎಂದು ಅವರು ಉಲ್ಲೇಖಿಸಿದ್ದಾರೆ. “ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಅವರ ನಾಯಕತ್ವ ಮತ್ತು ಬಿಜೆಪಿ ಎತ್ತಿಹಿಡಿಯುವ ರಾಷ್ಟ್ರೀಯತೆ, ದೇಶಭಕ್ತಿ ಹಾಗೂ ದೇಶಸೇವೆಯ ಆದರ್ಶಗಳಿಂದ ನಾನು ಎಂದಿಗೂ ಪ್ರೇರಿತಳಾಗಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ಮಾರ್ಗದರ್ಶನ ನೀಡಿದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನಾಯಕರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು” ಎಂದು ಹೇಳಿರುವ ಅವರು, ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ಪಕ್ಷದ ನಾಯಕರಿಗೆ ಮನವಿ ಮಾಡಿದ್ದಾರೆ. ಆದರೆ, ತಮ್ಮ ಮುಂದಿನ ರಾಜಕೀಯ ನಡೆ ಏನು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.
ತಮಿಳುನಾಡು ಬಿಜೆಪಿಯಲ್ಲಿ ಬದಲಾವಣೆಯ ಗಾಳಿ
ದಿನದ ಹಿಂದಷ್ಟೇ ಅಣ್ಣಾಮಲೈ ಅವರು ಬಿಜೆಪಿಗೆ ರಾಜೀನಾಮೆ ನೀಡಿ, ವಂಶಪಾರಂಪರ್ಯ ರಾಜಕೀಯ ಮತ್ತು ವ್ಯಕ್ತಿಪೂಜೆಯಿಂದ ದೂರವಿರುವ “ಸಾಮಾನ್ಯ ಜನರ ರಾಜಕೀಯ”ದ ಹೊಸ ಪಯಣವನ್ನು ಆರಂಭಿಸುವುದಾಗಿ ಘೋಷಿಸಿದ್ದರು. ನಟ ಸಿ. ಜೋಸೆಫ್ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಬೆಳವಣಿಗೆಯು ಅಣ್ಣಾಮಲೈ ಅವರ ಈ ಹೊಸ ಹೆಜ್ಜೆಗೆ ಕಾರಣ ಎಂದು ರಾಜಕೀಯ ವಿಶ್ಲೇಷಕರು ಭಾವಿಸಿದ್ದಾರೆ.
ಇದೇ ವೇಳೆ, ಅಣ್ಣಾಮಲೈ ನಿರ್ಗಮನದಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದು ತಮಿಳುನಾಡು ಬಿಜೆಪಿ ಹಾಲಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ತಿಳಿಸಿದ್ದು, ಬಿಜೆಪಿ ವಿಶ್ವದ ಅತಿ ದೊಡ್ಡ ಪಕ್ಷವಾಗಿದ್ದು, ತನ್ನ ಸಿದ್ಧಾಂತದೊಂದಿಗೆ ಮುನ್ನಡೆಯಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಲಂಡನ್‌ನಲ್ಲಿ ಭಾರತದ ಮುಖ್ಯ ನ್ಯಾ. ಸೂರ್ಯಕಾಂತ್ ಭಾಷಣಕ್ಕೆ ಅಡ್ಡಿ ; ಹೈಕಮಿಷನ್ ಕೆಂಡ



















