ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಇಂದಿನಿಂದ ಶುರುವಾಗಿದ್ದು, SIRಗೆ ನೇಮಕಗೊಂಡ ಸಿಬ್ಬಂದಿಗಳು ಮನೆ ಮನೆಗೆ ಬಂದು ಮತದಾರರ ಚೀಟಿ ಪರಿಷ್ಕರಣೆ ನಡೆಸುತ್ತಿದ್ದಾರೆ.
ಈ ನಡುವೇ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಮ್ಯಾಪಿಂಗ್ ವೇಳೆ ಲಕ್ಷಾಂತರ ಮತದಾರರು ಇನ್ನೂ ದೃಢೀಕರಣವಾಗದೇ ಉಳಿದಿರುವುದು, ಒಂದೇ ವ್ಯಕ್ತಿಯ ಹೆಸರು ಒಂದಕ್ಕಿಂತ ಹೆಚ್ಚು ಕಡೆ ಇರುವ ಸಾಧ್ಯತೆ ಸೇರಿದಂತೆ ಹಲವು ಪ್ರಶ್ನೆಗಳು ಚರ್ಚೆಗೆ ಗ್ರಾಸವಾಗಿವೆ.
ಜಿಬಿಎ ವ್ಯಾಪ್ತಿಯಲ್ಲಿ ಇದುವರೆಗೆ 76.35% ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, 23.65% (ಸುಮಾರು 24.60 ಲಕ್ಷ ಮತದಾರರು) ಇನ್ನೂ ಮ್ಯಾಪಿಂಗ್ ಆಗಿಲ್ಲ. ಈ ಅಂಕಿಅಂಶ ಚುನಾವಣಾ ಅಧಿಕಾರಿಗಳಿಗೂ ಸವಾಲಾಗಿದೆ. ಇದೇ ವೇಳೆ ಮ್ಯಾಪಿಂಗ್ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಒಂದೇ ಮತದಾರರ ಹೆಸರು ಎರಡು ಕಡೆಗಳಲ್ಲಿ ಇರುವ ಪ್ರಕರಣಗಳು, ಸ್ಥಳಾಂತರಗೊಂಡ ಮತದಾರರ ಹೆಸರು ಇನ್ನೂ ಪಟ್ಟಿಯಲ್ಲಿ ಉಳಿದಿರುವುದು ಹಾಗೂ ವಿಳಾಸದಲ್ಲಿ ಲಭ್ಯವಾಗದ ಮತದಾರರ ವಿವರಗಳು ಪತ್ತೆಯಾಗುತ್ತಿವೆ. ಆದರೆ, ಇದರಿಂದಲೇ ಎಲ್ಲರೂ “ನಕಲಿ ಮತದಾರರು” ಎಂದು ಹೇಳಲು ಸಾಧ್ಯವಿಲ್ಲ. ಅಂತಿಮ ಪರಿಶೀಲನೆಯ ಬಳಿಕವೇ ಅರ್ಹತೆ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚು ಅನ್-ಮ್ಯಾಪಿಂಗ್ ಇರುವ ಕ್ಷೇತ್ರಗಳು :
ಬೆಂಗಳೂರು ದಕ್ಷಿಣ – 1,55,763
ಬೊಮ್ಮನಹಳ್ಳಿ – 1,45,653
ಮಹದೇವಪುರ – 1,26,725
ಯಶವಂತಪುರ – 1,21,324
ಬ್ಯಾಟರಾಯನಪುರ – 1,08,089
ಕೆ.ಆರ್. ಪುರ – 1,03,905
ಗೋವಿಂದರಾಜನಗರ – 1,01,564
ಸರ್ವಜ್ಞನಗರ – 14,168
ಬೆಂಗಳೂರು ನಗರ ಜಿಲ್ಲೆಯಲ್ಲೇ 7,65,005 .
ಮತದಾರರು ಇನ್ನೂ ಅನ್-ಮ್ಯಾಪಿಂಗ್ ಆಗಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯಲ್ಲೇ 1,55,763 ಮತದಾರರು ದೃಢೀಕರಣಕ್ಕೆ ಬಾಕಿಯಿದ್ದಾರೆ. ಉಳಿದಿರುವ ಮ್ಯಾಪಿಂಗ್ ಪೂರ್ಣಗೊಂಡ ಬಳಿಕವೇ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಯುತ್ತದೆಯೇ, ಅಳಿಸಲಾಗುತ್ತದೆಯೇ ಅಥವಾ ತಿದ್ದುಪಡಿ ಆಗುತ್ತದೆಯೇ ಎಂಬುದು ಸ್ಪಷ್ಟವಾಗಲಿದೆ.
ಪ್ರಸ್ತುತ ಲಭ್ಯವಿರುವ ಅಂಕಿಅಂಶಗಳು ಅನ್-ಮ್ಯಾಪಿಂಗ್ ಮತದಾರರ ಸಂಖ್ಯೆಯನ್ನು ಮಾತ್ರ ಸೂಚಿಸುತ್ತವೆ. ಇವುಗಳನ್ನು “ನಕಲಿ ಮತದಾರರು” ಎಂದು ಪರಿಗಣಿಸಲು ಸಾಧ್ಯವಿಲ್ಲ. ಅಂತಿಮ ಪರಿಶೀಲನೆ ಮತ್ತು ಚುನಾವಣಾ ಆಯೋಗದ ಕ್ರಮಗಳ ಬಳಿಕವೇ ಯಾವುದೇ ಅಕ್ರಮ ಅಥವಾ ನಕಲಿ ನೋಂದಣಿ ಕುರಿತು ಅಧಿಕೃತವಾಗಿ ನಿರ್ಧಾರವಾಗುತ್ತದೆ.
ಇದನ್ನೂ ಓದಿ : ಇಂದಿನಿಂದ ರಾಜ್ಯಾದ್ಯಂತ SIR ಪ್ರಕ್ರಿಯೆ ಆರಂಭ : ಮನೆಮನೆಗೆ ಬಿಎಲ್‌ಒ ಭೇಟಿ!


















