ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಕಮಲಾಪುರ ಕೆರೆತಾಂಡ ಸರ್ಕಾರಿ ಶಾಲೆಯ ನೆಚ್ಚಿನ ಶಿಕ್ಷಕಿ ಅನ್ನಪೂರ್ಣ ದೇವಿ ಅವರ ಸ್ವಯಂ ನಿವೃತ್ತಿ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ಭಾವುಕ ಬೀಳ್ಕೊಡುಗೆ ಸಮಾರಂಭ ನಡೆದಿದೆ.
ಲೌಕಿಕ ಆಸ್ತಿಗಿಂತ ಅಂತರಂಗದ ನೆಮ್ಮದಿಯೇ ಶಾಶ್ವತವಾಗಿದ್ದು, ಕರ್ತವ್ಯ ಮುಗಿದ ತೃಪ್ತಿಯಲ್ಲಿ ಕುಟುಂಬ ಮತ್ತು ಅಧ್ಯಾತ್ಮಕ್ಕಾಗಿ ನಿವೃತ್ತಿಯ ಹೆಜ್ಜೆ ಇಡುತ್ತಿದ್ದೇನೆ ಎಂದು ಶಿಕ್ಷಕಿ ತಿಳಿಸಿದ್ದಾರೆ. ಅನ್ನಪೂರ್ಣ ದೇವಿ ಅವರ ನಿವೃತ್ತಿಯ ಸುದ್ದಿ ತಿಳಿಯುತ್ತಿದ್ದಂತೆ ಶಾಲಾ ಮಕ್ಕಳು ತಾಯಿಯಂತೆ ಪ್ರೀತಿಯಿಂದ ವಿದ್ಯಾದಾನ ಮಾಡಿದ ನೆಚ್ಚಿನ ಗುರುಗಳನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿದೆ.
ಶಿಕ್ಷಕ ವೃತ್ತಿ ಪರಮಾತ್ಮ ನೀಡಿದ ಪ್ರಸಾದವಿದ್ದಂತೆ ಎಂದಿರುವ ಅವರು, ಇಲಾಖೆಯ ಒತ್ತಡಗಳಿದ್ದರೂ ಮಕ್ಕಳ ಭವಿಷ್ಯಕ್ಕಾಗಿ ಕಳೆದ 23 ವರ್ಷಗಳ ಕಾಲ ಯಾವುದೇ ಕುಂದು ಬಾರದಂತೆ ಅತ್ಯಂತ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದಿದ್ದಾರೆ.


















