ಬೆಂಗಳೂರು : ನಗರದ ಹೊರವಲಯದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಹೊಸಕೋಟೆ ಬಿರಿಯಾನಿ ತಿನ್ನಲು ತೆರಳಿದ್ದ ವಿದ್ಯಾರ್ಥಿಗೆ ದುಷ್ಕರ್ಮಿಗಳು ಚಾಕು ಇರಿದಿರುವ ಘಟನೆ ರಾಮಮೂರ್ತಿ ನಗರದ ಬಂಜಾರ ಲೇಔಟ್‌ನಲ್ಲಿ ನಡೆದಿದೆ.
ನಿನ್ನೆ ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿದ್ಯಾರ್ಥಿಯನ್ನು ಅಟ್ಟಾಡಿಸಿ ಚಾಕುವಿನಿಂದ ಇರಿಯುತ್ತಿರುವ ದೃಶ್ಯಗಳು ಆತಂಕ ಮೂಡಿಸಿವೆ. ಧೀರಜ್ (21) ಎಂಬ ಯುವಕ ಈ ದಾಳಿಯಲ್ಲಿ ಗಾಯಗೊಂಡಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಧೀರಜ್ ಬಿಬಿಎ ವ್ಯಾಸಂಗ ಮಾಡುತ್ತಿದ್ದು, ಜೊತೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಬೈಕ್ ಅಡ್ಡ ಬಂದ ವಿಚಾರಕ್ಕೆ ಆರಂಭವಾದ ಜಗಳವೇ ಬಳಿಕ ಮಾರಕ ಹಲ್ಲೆಗೆ ತಿರುಗಿದೆ ಎನ್ನಲಾಗಿದೆ. ಮೊದಲು ಬೈಕ್‌ನಲ್ಲಿ ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಧೀರಜ್ ಮೇಲೆ ಹಿಂಬದಿಯಿಂದ ಬೈಕ್‌ನಲ್ಲಿ ಬಂದಿದ್ದ ಮಿಥುನ್, ಭುವನ್ ಹಾಗೂ ಅಪ್ರಾಪ್ತ ಬಾಲಕ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಾತಿನ ಚಕಮಕಿ ಜಗಳಕ್ಕೆ ತಿರುಗಿ, ಬಳಿಕ ಆರೋಪಿಗಳು ಚಾಕುವಿನಿಂದ ಧೀರಜ್ ಬೆನ್ನು ಹಾಗೂ ತೊಡೆ ಭಾಗಕ್ಕೆ ಐದಾರು ಬಾರಿ ಇರಿದಿದ್ದಾರೆ ಎನ್ನಲಾಗಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಧೀರಜ್ ರಸ್ತೆಯಲ್ಲಿ ಓಡಲು ಯತ್ನಿಸಿದರೂ ಆರೋಪಿಗಳು ಅಟ್ಟಾಡಿಸಿ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಾಕು ಇರಿದ ಬಳಿಕ ಆರೋಪಿಗಳು ಧೀರಜ್‌ನ ಬೈಕ್ ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ರಕ್ತದ ಮಡುವಿನಲ್ಲಿ ರಸ್ತೆಯಲ್ಲೇ ನಿಂತಿದ್ದ ಗಾಯಾಳು ಧೀರಜ್‌ರನ್ನು ಮತ್ತೋರ್ವ ಬೈಕ್ ಸವಾರ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಭುವನ್, ಮಿಥುನ್ ಹಾಗೂ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಲೀಸ್ & ಬಾಡಿಗೆ ಮನೆಗಳ ಹೆಸರಲ್ಲಿ ಕೋಟ್ಯಾಂತರ ರೂ. ವಂಚನೆ – ‘ಜಾನ್ಸ್ ಅಸೆಟ್’ ಕಂಪನಿ ವಿರುದ್ಧ FIR!


















