ಬಳ್ಳಾರಿ : ನಗರದಲ್ಲಿ ಪಾಲಿಕೆ ಸದಸ್ಯೆ ಉಮಾದೇವಿ ಅವರ ಪತಿ ಶಿವರಾಜ್ ವಿರುದ್ಧ ಬಡವರಿಗೆ ಸೈಟ್ ಕೊಡಿಸುವ ಹೆಸರಿನಲ್ಲಿ ಮಹಾ ವಂಚನೆ ನಡೆಸಿದ ಆರೋಪ ಕೇಳಿಬಂದಿದೆ. ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ, ಬಡ ಜನರಿಗೆ ಸೈಟ್ ನೀಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಬೂದಿಹಾಳ್ ಗ್ರಾಮದ ಸರ್ವೆ ನಂಬರ್ 125 P ವ್ಯಾಪ್ತಿಯ ಸುಮಾರು 7.87 ಎಕರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರಕ್ಕೆ ಸೇರಿದ ಹಳ್ಳದ ಜಾಗವನ್ನು ಅಕ್ರಮವಾಗಿ ವಶಕ್ಕೆ ಪಡೆದು, ಅಲ್ಲೇ ಲೇಔಟ್ ನಿರ್ಮಾಣ ಮಾಡಿ ಜನರಿಗೆ ಸೈಟ್ ಹಂಚಿಕೆ ಮಾಡಲಾಗಿದೆ ಎನ್ನಲಾಗಿದೆ.
ಪ್ರತಿ ಸೈಟ್‌ಗೆ ಸುಮಾರು 1.50 ಲಕ್ಷ ರೂಪಾಯಿ ಪಡೆದು ಬಡ ಜನರಿಗೆ ಜಾಗ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸೈಟ್ ಸಿಗುತ್ತದೆ ಎಂಬ ನಂಬಿಕೆಯಲ್ಲಿ ಹಲವರು ತಮ್ಮ ಜೀವನದ ಸಂಗ್ರಹಿತ ಹಣವನ್ನು ನೀಡಿದ್ದಾಗಿ ಹೇಳಲಾಗುತ್ತಿದೆ. ಜಿಲ್ಲಾಡಳಿತದ ವತಿಯಿಂದ ನಡೆದ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ಈ ಮಹಾ ಮೋಸ ಬೆಳಕಿಗೆ ಬಂದಿದೆ. ಬಳ್ಳಾರಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಸ್ಥಳಕ್ಕೆ ಬಂದ ಬಡ ಜನರು ತಮ್ಮ ಅಳಲು ತೋಡಿಕೊಂಡಿದ್ದಾರೆ.
“ಶಿವರಾಜ್ ಕಡೆಯಿಂದಲೇ ಹಣ ಕೊಟ್ಟು ಸೈಟ್ ಖರೀದಿ ಮಾಡಿದ್ದೇವೆ” ಎಂದು ಹಲವರು ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ. ಇದೀಗ ಸೈಟ್ ಕೂಡ ಇಲ್ಲ, ಕೊಟ್ಟ ಹಣವೂ ಕೈ ಸೇರಿಲ್ಲ ಎಂದು ಜನ ಕಣ್ಣೀರು ಹಾಕುತ್ತಿದ್ದಾರೆ.
ಒತ್ತುವರಿ ತೆರವು ವೇಳೆ ಜನ ಶಿವರಾಜ್ ಹೆಸರು ಹೇಳಿದ್ದು, ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ. ಇದರ ನಡುವೆ ಶಿವರಾಜ್‌ಗೆ ಕಂತೆ ಕಂತೆ ಹಣ ನೀಡಿರುವ ವಿಡಿಯೋ ಕೂಡ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ : ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬೆನ್ನಲ್ಲೇ JEE, NEET ಪರೀಕ್ಷೆಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಚಿಂತನೆ!



















