ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕೋಮುಗಲಭೆ ಉಂಟಾಗಿದ್ದು, ಪಟ್ಟಣ ಅಕ್ಷರಶಃ ಹೊತ್ತಿ ಉರಿದಿದೆ. ಈಗ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬುಧವಾರ ಸಂಜೆ ಗಣೇಶನ ವಿಸರ್ಜನಾ ಮೆರವಣಿಗೆ ಆರಂಭವಾಗಿತ್ತು. ಪಟಾಕಿ ಸಿಡಿಸುತ್ತ, ಡೊಳ್ಳು, ತಮಟೆ, ಡಿಜೆ ಸೌಂಡ್ ನೊಂದಿಗೆ ಹಿಂದೂ ಯುವಕರು ಮೆರವಣಿಗೆ ಮೂಲಕ ಗಣೇಶನ ಮೂರ್ತಿ ವಿಸರ್ಜಿಸಲು ಹೊರಟಿದ್ದರು. ಬದರಿಕೊಪ್ಪಲಿನಿಂದ ಹೊರಟ ಗಣೇಶನ ವಿಸರ್ಜನಾ ಮೆರವಣಿಗೆ ಮಂಡ್ಯ ಸರ್ಕಲ್ ಮಾರ್ಗವಾಗಿ ತೆರಳಿತ್ತು. ಯಾ ಅಲ್ಲಾ ಮಸೀದಿ ಮತ್ತು ದರ್ಗಾ ಮುಂಭಾಗದಲ್ಲಿನ ರಸ್ತೆಯಲ್ಲಿಯೂ ಮೆರವಣಿಗೆ ಹೊರಟಿತ್ತು.
ಆದರೆ ಮಂಡ್ಯ ಸರ್ಕಲ್ ಬಳಿಯೇ ಕೆಲ ಅನ್ಯಕೋಮಿನ ಯುವಕರು ಮೆರವಣಿಗೆಗೆ ತಡೆಯೊಡ್ದಿದ್ದಾರೆ. ಮಸೀದಿ ಮುಂದೆ ಡಿಜೆ ಸೌಂಡ್, ತಮಟೆ, ಡೊಳ್ಳು ಬಾರಿಸದಂತೆ ಕ್ಯಾತೆ ತೆಗಿದ್ದಿದ್ದಾರೆ. ಆಗ ಎರಡೂ ಗುಂಪಿನ ಮಧ್ಯೆ ಮಾತಿಗೆ ಮಾತು ಬೆಳೆದಿದೆ.
ಆಗ ಯಾ ಅಲ್ಲಾ ಮಸೀದಿ ಮತ್ತು ದರ್ಗಾ ಮುಂಭಾಗದ ರಸ್ತೆಯಲ್ಲಿ ಮೆರವಣಿಗೆ ಹೊರಟಿದೆ. ಮಸೀದಿಯಿಂದ ಸ್ವಲ್ಪ ದೂರ ಇದೆ ಎನ್ನುವಾಗ ಅನ್ಯಕೋಮಿನ ಯುವಕರು ಏಕಾಏಕಿ ಗಣೇಶ ವಿಸರ್ಜನಾ ಮೆರವಣಿಗೆಯತ್ತ ಕಲ್ಲು ತೂರಾಟ ನಡೆಸಿದ್ದಾರೆ. ಕಟ್ಟಡದ ಮೇಲೆ ನಿಂತು ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ. ಆಗ ಗಲಾಟೆ ಶುರುವಾಗಿದೆ. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದ್ದಾರೆ. ನಂತರ ಕಲ್ಲುತೂರಾಟ ನಡೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಹಿಂದೂಗಳು ನಾಗಮಂಗಲ ಪೊಲೀಸ್ ಠಾಣೆ ಮುಂದೆಯೇ ಗಣೇಶನ ವಿಗ್ರಹವನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ಆನಂತರ ಅನ್ಯಕೋಮಿನ ಯುವಕರ ಗುಂಪು ಸಿಕ್ಕಸಿಕ್ಕ ಅಂಗಡಿಗಳ ಮೇಲೆ ದಾಳಿ ನಡೆಸಿದೆ. ಪೆಟ್ರೋಲ್ ಬಾಂಬ್ಗಳನ್ನು ತೂರಿದೆ. ಗುಜರಿ ಅಂಗಡಿ ಧ್ವಂಸ ಗೊಳಿಸಲಾಗಿದೆ. ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಾರೆ. ಕೆಲವು ಕಿಡಿಗೇಡಿಗಳು ರಸ್ತೆಯಲ್ಲೇ ಲಾಂಗು, ರಾಡ್, ತಲ್ವಾರ್ಗಳನ್ನು ಝಳಪಿಸುತ್ತಾ ಅಟ್ಟಹಾಸ ಪ್ರದರ್ಶಿಸಿದ್ದಾರೆ. ಸ್ಥಳಕ್ಕೆ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್, ಮಂಡ್ಯ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 50 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.