ನ್ಯೂಯಾರ್ಕ್: ಸತತ 15 ಪಂದ್ಯ ಗೆದ್ದಿದ್ದ ಸ್ಪೇನ್ ನ ಕಾರ್ಲೋಸ್ ಆಲ್ಕರಜ್ ಗೆ ಯುಎಸ್ ಓಪನ್ ಪುರುಷರ ಸಿಂಗಲ್ಸ್ನ 2ನೇ ಸುತ್ತಿನಲ್ಲಿ ಶಾಕ್ ಎದುರಾಗಿದೆ. ವಿಶ್ವ ನಂ.3 ಆಲ್ಕರಜ್ ಗೆ ವಿಶ್ವ ರ್ಯಾಂಕಿಂಗ್ ನಲ್ಲಿ 74ನೇ ಸ್ಥಾನದಲ್ಲಿರುವ ನೆದರ್ ಲೆಂಡ್ ನ ಬೊಟಿಕ್ ವಾನ್ ಡೆ ಝಾಂಡ್ಲ್ಸ್ 1-6, 5-7, 4-6 ನೇರ ಸೆಟ್ ಗಳಿಂದ ಸೋಲಿನ ರುಚಿ ತೋರಿಸಿದ್ದಾರೆ.
ಜೂನ್ ನಲ್ಲಿ ಫ್ರೆಂಚ್ ಓಪನ್, ಜುಲೈನಲ್ಲಿ ವಿಂಬಲ್ಡನ್ ಗೆದ್ದಿದ್ದ ಆಲ್ಕರಜ್, ಯುಎಸ್ ಓಪನ್ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದರೆ, ಸ್ಪೇನ್ ಆಟಗಾರನಿಗೆ ಸೋಲಿನ ರುಚಿ ಸಿಕ್ಕಿದೆ. ಅಲ್ಲದೇ, ಆಲ್ಕರಜ್ ಇಲ್ಲಿಯವರೆಗೆ ಯುಎಸ್ ಓಪನ್ ನಲ್ಲಿ ಕ್ವಾರ್ಟರ್ ಫೈನಲ್ ಗೂ ಮೊದಲು ಸೋಲು ಕಂಡಿರಲಿಲ್ಲ. ಆದರೆ, ಈ ಸೋಲು ಅವರಿಗೆ ತೀವ್ರ ಆಘಾತ ನೀಡಿದೆ.
ವಿಶ್ವ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನದಲ್ಲಿರುವ ಇಟಲಿಯ ಯಾನ್ನಿಕ್ ಸಿನ್ನರ್ ಹಾಗೂ ಪೋಲೆಂಡ್ ನ ಇಗಾ ಸ್ವಿಯಾಟೆಕ್ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ಸಿಂಗಲ್ಸ್ ನಲ್ಲಿ 3ನೇ ಸುತ್ತಿಗೆ ಎಂಟ್ರಿ ಕೊಟ್ಟಿದ್ದಾರೆ. 4 ಗ್ರ್ಯಾನ್ ಸ್ಲಾಂಗಳನ್ನು ಗೆದ್ದಿದ್ದ ಜಪಾನ್ ನ ನವೊಮಿ ಒಸಾಕ, 2ನೇ ಸುತ್ತಿನಲ್ಲಿ ಗಣರಾಜ್ಯದ ಕ್ಯಾರೋಲಿನಾ ಮುಕೋವಾ ವಿರುದ್ಧ 3-6, 6-7ರಲ್ಲಿ ಸೋತಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಭಾರತದ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯ ಎಬೆನ್ ಜೋಡಿ ಮೊದಲ ಪಂದ್ಯದಲ್ಲಿ ಗೆದ್ದಿದೆ. ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲಿ ನೆದರ್ ಲೆಂಡ್ ಸ್ಯಾಂಡರ್ ಅರೆಂಡ್ -ರಾಬಿನ್ ಹಾಸ್ ವಿರುದ್ಧ 6-3, 7-5 ನೇರ ಸೆಟ್ ಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಬಾರಿ ಬೋಪಣ್ಣ-ಎಬೆನ್ ಈ ಟೂರ್ನಿಯ ರನ್ನರ್ ಅಪ್ ಆಗಿದ್ದರು.