ಬೆಂಗಳೂರು: ಕಚೇರಿ ಕಂಪ್ಯೂಟರ್ ಗಳು, ಸಾರ್ವಜನಿಕ ವ್ಯವಸ್ಥೆಗಳು (ಸೈಬರ್ ಕೆಫೆ ಇತ್ಯಾದಿ) ಅಥವಾ ಬೇರೆಯವರೊಂದಿಗೆ ಹಂಚಿಕೊಳ್ಳುವ ಸಾಧನಗಳಲ್ಲಿ (Shared Computers) ವಾಟ್ಸ್ ಆ್ಯಪ್ ವೆಬ್ (WhatsApp Web) ಬಳಸುವಾಗ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರ್ಕಾರ ಮಹತ್ವದ ಎಚ್ಚರಿಕೆ ನೀಡಿದೆ. ವಂಚನೆಯ ಸಾಧ್ಯತೆ ಇರುವುದರಿಂದ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ರಾಷ್ಟ್ರೀಯ ಸೈಬರ್ ಅಪರಾಧ ವಿಶ್ಲೇಷಣಾ ಘಟಕ (NCTAU) ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ.
ಸಕ್ರಿಯವಾಗಿರುವ ವಾಟ್ಸ್ ಆ್ಯಪ್ ವೆಬ್ ಸೆಷನ್ ಗಳನ್ನು ಸೈಬರ್ ವಂಚಕರು ದುರುಪಯೋಗಪಡಿಸಿಕೊಂಡು ಖಾತೆಗಳನ್ನು ಹ್ಯಾಕ್ ಮಾಡುವ, ಖಾಸಗಿ ಚಾಟ್ ಗಳನ್ನು ಓದುವ ಮತ್ತು ಹಣಕಾಸಿನ ವಂಚನೆ ನಡೆಸುವ ಅಪಾಯವಿದೆ ಎಂದು ಸಂಸ್ಥೆ ಎಚ್ಚರಿಸಿದೆ. ಹಾಗಾಗಿ, ಸದ್ಯದ ಮಟ್ಟಿಗೆ ವಾಟ್ಸ್ ಆ್ಯಪ್ ವೆಬ್ ಬಳಸುವುದು ಅಪಾಯಕಾರಿ ಎನಿಸಿದೆ.
ಏನೆಲ್ಲ ಎಚ್ಚರಿಕೆ ನೀಡಿದೆ ಸರ್ಕಾರ?
• ಬ್ರೌಸರ್ ಟ್ಯಾಬ್ ಮುಚ್ಚಿದರೆ ಲಾಗ್ ಔಟ್ ಆಗುವುದಿಲ್ಲ: ಬ್ರೌಸರ್ ಟ್ಯಾಬ್ ಅಥವಾ ವಿಂಡೋವನ್ನು ಮುಚ್ಚಿದ ಮಾತ್ರಕ್ಕೆ ವಾಟ್ಸ್ ಆ್ಯಪ್ ವೆಬ್ ವೆಬ್ ಸೆಷನ್ ಕೊನೆಗೊಳ್ಳುವುದಿಲ್ಲ. ಬಳಕೆದಾರರು ಪ್ರತಿ ಬಾರಿಯೂ ಕೆಲಸ ಮುಗಿದ ನಂತರ ಲಾಗ್ ಔಟ್ ಮಾಡುವುದು ಕಡ್ಡಾಯವಾಗಿದೆ.
• ವಂಚನೆ ಮತ್ತು ಸೋಗು ಹಾಕುವ ಅಪಾಯ: ಓಪನ್ ಆಗಿರುವ ಸೆಷನ್ ಮೂಲಕ ದುಷ್ಕರ್ಮಿಗಳು ನಿಮ್ಮ ಖಾಸಗಿ ಸಂದೇಶಗಳು, ಸಂಪರ್ಕ ಪಟ್ಟಿ ಮತ್ತು ಗ್ರೂಪ್ ಚಾಟ್ ಗಳನ್ನು ವೀಕ್ಷಿಸಬಹುದು. ಅಲ್ಲದೆ, ಬಳಕೆದಾರರ ಹೆಸರಿನಲ್ಲಿಯೇ ಬೇರೆಯವರಿಗೆ ಸಂದೇಶಗಳನ್ನು ಕಳುಹಿಸಬಹುದು. ಆ ಮೂಲಕ ಹಣಕಾಸು ವಂಚನೆಯನ್ನು ಕೂಡ ಎಸಗಬಹುದು.
• ಸೂಕ್ಷ್ಮ ಮಾಹಿತಿ ವಿನಿಮಯ ಬೇಡ: ಕಂಪ್ಯೂಟರ್ ವಾಟ್ಸ್ ಆ್ಯಪ್ ವೆಬ್ ವೆಬ್ ಮೂಲಕ ಸರ್ಕಾರಿ, ಸಂಸ್ಥೆಯ, ಹಣಕಾಸಿನ ಅಥವಾ ಇತರ ಗೌಪ್ಯ ಮಾಹಿತಿಗಳನ್ನು ಹಂಚಿಕೊಳ್ಳದಂತೆ ಸಲಹೆ ನೀಡಲಾಗಿದೆ.
ಸುರಕ್ಷತೆಗಾಗಿ ನೀಡಿರುವ ಸಲಹೆಗಳು
- ಸಾರ್ವಜನಿಕ ಸಾಧನಗಳನ್ನು ತಪ್ಪಿಸಿ: ಸೈಬರ್ ಕೆಫೆಗಳು, ಹೋಟೆಲ್ ಗಳು, ಕಚೇರಿ ಕಂಪ್ಯೂಟರ್ ಗಳಲ್ಲಿ ವಾಟ್ಸ್ ಆ್ಯಪ್ ವೆಬ್ ಬಳಸುವುದನ್ನು ತಪ್ಪಿಸಿ.
- ಖಾಯಂ ಲಾಗಿನ್ ಬೇಡ: ವಾಟ್ಸ್ ಆ್ಯಪ್ ವೆಬ್ ವೆಬ್ ಸೆಷನ್ಗಳನ್ನು ಯಾವಾಗಲೂ ಲಾಗಿನ್ ಸ್ಥಿತಿಯಲ್ಲಿಯೇ ಇಡಬೇಡಿ ಮತ್ತು ಕೆಲಸ ಮುಗಿದ ತಕ್ಷಣ ಲಾಗ್ ಔಟ್ ಮಾಡಿ.
- ಇನ್ ಕಾಗ್ನಿಟೋ ಮೋಡ್ ಬಳಕೆ: ಅಗತ್ಯವಿದ್ದಾಗ ಬ್ರೌಸರ್ ನಲ್ಲಿ ಇನ್ ಕಾಗ್ನಿಟೋ ಮೋಡ್ ಬಳಸಲು ಸೂಚಿಸಲಾಗಿದೆ.
- ಅನುಮಾನಾಸ್ಪದ ಚಟುವಟಿಕೆ ಗಮನಿಸಿ: ನಿಮ್ಮ ಖಾತೆಯಲ್ಲಿ ವಿವರಿಸಲಾಗದ ಚಟುವಟಿಕೆಗಳು ಅಥವಾ ಸಂಪರ್ಕದಲ್ಲಿರುವವರಿಂದ ಅಸಹಜ ಪ್ರತಿಕ್ರಿಯೆಗಳು ಕಂಡುಬಂದರೆ ತಕ್ಷಣ ಗಮನಿಸಿ.
- ಸಾಫ್ಟ್ ವೇರ್ ನವೀಕರಣ ಹಾಗೂ ಎಚ್ಚರಿಕೆ: ಆಪರೇಟಿಂಗ್ ಸಿಸ್ಟಮ್, ಬ್ರೌಸರ್ ಮತ್ತು ಭದ್ರತಾ ಸಾಫ್ಟ್ ವೇರ್ ಗಳನ್ನು ಆಗಾಗ ಅಪ್ಡೇಟ್ ಮಾಡಿಕೊಳ್ಳಿ. ಜತೆಗೆ ಅನುಮಾನಾಸ್ಪದ ಡೌನ್ ಲೋಡ್ ಗಳು, ಅಪರಿಚಿತ ಫೈಲ್ ಗಳನ್ನು ಓಪನ್ ಮಾಡಬೇಡಿ.



















