ಚೆನ್ನೈ: ಕಳೆದ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮುಖ್ಯಸ್ಥ, ಅಂದಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಸೋಲುಣಿಸಿ ‘ಜೈಂಟ್ ಕಿಲ್ಲರ್’ ಎಂದೇ ಖ್ಯಾತರಾಗಿದ್ದ ಟಿವಿಕೆ (TVK) ಶಾಸಕ ವಿ.ಎಸ್. ಬಾಬು ಅವರ ನಿಧನದ ಬೆನ್ನಲ್ಲೇ, ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆ ಶುರುವಾಗಿದೆ. ಬಾಬು ಅವರ ಅಕಾಲಿಕ ಮರಣದಿಂದ ತೆರವಾಗಿರುವ ಕೊಳತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಶೀಘ್ರದಲ್ಲೇ ಉಪಚುನಾವಣೆ ನಡೆಯಲಿದ್ದು, ಸ್ಟಾಲಿನ್ ಮತ್ತೊಮ್ಮೆ ತಮ್ಮ ಭದ್ರಕೋಟೆಯಿಂದ ಅದೃಷ್ಟ ಪರೀಕ್ಷೆಗಿಳಿದು ವಿಧಾನಸಭೆ ಪ್ರವೇಶಿಸುತ್ತಾರೆಯೇ ಎಂಬ ಕುತೂಹಲ ಮೂಡಿದೆ.
ಡಿಎಂಕೆ ಪಾಳಯದಲ್ಲಿ ಸ್ಟಾಲಿನ್ ಸ್ಪರ್ಧೆಗೆ ಕೂಗು
2011ರಿಂದ ಸತತವಾಗಿ ತಾವು ಪ್ರತಿನಿಧಿಸುತ್ತಿದ್ದ ಕೊಳತ್ತೂರು ಕ್ಷೇತ್ರದಲ್ಲಿ ಸ್ಟಾಲಿನ್ ಸೋಲು ಕಂಡಿದ್ದು ಡಿಎಂಕೆ ಪಾಲಿಗೆ ದೊಡ್ಡ ಆಘಾತವಾಗಿತ್ತು. ಚಿತ್ರನಟ ವಿಜಯ್ ಸ್ಥಾಪಿಸಿದ ಟಿವಿಕೆ ಪಕ್ಷದ ಅಲೆಯಲ್ಲಿ ಡಿಎಂಕೆ ಅಧಿಕಾರವನ್ನೂ ಕಳೆದುಕೊಂಡಿತ್ತು. ಇದೀಗ ಉಪಚುನಾವಣೆ ಎದುರಾಗುತ್ತಿರುವುದರಿಂದ, ಸ್ಟಾಲಿನ್ ಮತ್ತೆ ಕೊಳತ್ತೂರಿನಿಂದ ಸ್ಪರ್ಧಿಸಬೇಕು ಎಂಬ ಒತ್ತಾಯ ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಡಿಎಂಕೆ ಸಂಸದ ಸಿ. ರವೀಂದ್ರನ್, “ಅದು ನಮ್ಮ ನಾಯಕರ ಕ್ಷೇತ್ರ, ಸ್ಪರ್ಧಿಸುವ ನಿರ್ಧಾರ ಸಂಪೂರ್ಣವಾಗಿ ಅವರಿಗೇ ಬಿಟ್ಟಿದ್ದು. ಒಬ್ಬ ಡಿಎಂಕೆ ಕಾರ್ಯಕರ್ತನಾಗಿ ಅವರು ಮತ್ತೆ ಕಣಕ್ಕಿಳಿಯುವುದನ್ನು ನೋಡಲು ನಾನು ಬಯಸುತ್ತೇನೆ. ಆದರೆ ಅಂತಿಮ ನಿರ್ಧಾರ ಅವರದೇ” ಎಂದು ಸ್ಪಷ್ಟಪಡಿಸಿದ್ದಾರೆ.
ಬಾಬು ರಾಜಕೀಯ ಪಯಣ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಅಭ್ಯರ್ಥಿಯಾಗಿದ್ದ ವಿ.ಎಸ್. ಬಾಬು 82,997 ಮತಗಳನ್ನು ಪಡೆದರೆ, ಸ್ಟಾಲಿನ್ 74,202 ಮತಗಳನ್ನು ಪಡೆದು 8,795 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಕುತೂಹಲಕಾರಿ ಸಂಗತಿಯೆಂದರೆ, ಬಾಬು ತಮ್ಮ ರಾಜಕೀಯ ಜೀವನವನ್ನು ಡಿಎಂಕೆಯಿಂದಲೇ ಆರಂಭಿಸಿ, ಚೆನ್ನೈ (ಉತ್ತರ) ಜಿಲ್ಲಾ ಕಾರ್ಯದರ್ಶಿಯಾಗಿ ಬೆಳೆದಿದ್ದರು. 2006ರಲ್ಲಿ ಪುರಸವಾಕ್ಕಂ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ನಂತರ ಎಐಎಡಿಎಂಕೆ ಸೇರಿದ್ದರು. ವಿಧಾನಸಭಾ ಚುನಾವಣೆಗೂ ಮುನ್ನ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಸೇರ್ಪಡೆಯಾಗಿ, ಸ್ವತಃ ಸ್ಟಾಲಿನ್ ಅವರನ್ನೇ ಮಣಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು.
ಉಭಯ ಪಕ್ಷಗಳಿಗೂ ಪ್ರತಿಷ್ಠೆಯ ಕಣ
ಮುಂಬರುವ ಉಪಚುನಾವಣೆಯು ಡಿಎಂಕೆ ಮತ್ತು ಆಡಳಿತಾರೂಢ ಟಿವಿಕೆ ಎರಡೂ ಪಕ್ಷಗಳಿಗೂ ಅತ್ಯಂತ ನಿರ್ಣಾಯಕವಾಗಿದೆ. ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಕಳೆದುಕೊಂಡಿರುವ ರಾಜಕೀಯ ವರ್ಚಸ್ಸನ್ನು ಮರಳಿ ಪಡೆಯಲು ಡಿಎಂಕೆಗೆ ಇದೊಂದು ಉತ್ತಮ ಅವಕಾಶ. ಆದರೆ, ಸ್ಟಾಲಿನ್ ಮತ್ತೆ ಕಣಕ್ಕಿಳಿದು ಒಂದು ವೇಳೆ ಹಿನ್ನಡೆ ಅನುಭವಿಸಿದರೆ, ಅದು ಅವರ ರಾಜಕೀಯ ಜೀವನಕ್ಕೆ ಮತ್ತಷ್ಟು ಮುಜುಗರ ತರುವ ಅಪಾಯವೂ ಇದೆ. ಮತ್ತೊಂದೆಡೆ, ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಈ ಉಪಚುನಾವಣೆ ತನ್ನ ಮೊದಲ ಅಗ್ನಿಪರೀಕ್ಷೆಯಾಗಿದ್ದು, ತನ್ನ ಪ್ರತಿಷ್ಠಿತ ಗೆಲುವನ್ನು ಉಳಿಸಿಕೊಳ್ಳುವ ಜೊತೆಗೆ ಜನಬೆಂಬಲ ಇನ್ನೂ ಗಟ್ಟಿಯಾಗಿದೆ ಎಂಬುದನ್ನು ಸಾಬೀತುಪಡಿಸುವ ಸವಾಲು ಎದುರಾಗಿದೆ.



















