ಹೈದರಾಬಾದ್: ಭಾರತೀಯ ಯುವ ಕಾಂಗ್ರೆಸ್ನ (IYC) ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಹಾಗೂ ರಾಷ್ಟ್ರೀಯ ಉಸ್ತುವಾರಿ ಮನೀಶ್ ಶರ್ಮಾ ಅವರ ಸಾಮಾಜಿಕ ಜಾಲತಾಣ ಖಾತೆಗಳ ಮೇಲೆ ನಿರ್ಬಂಧ ಹೇರಿದ ಕ್ರಮವನ್ನು ವಿರೋಧಿಸಿ, ತೆಲಂಗಾಣ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಹೈದರಾಬಾದ್ನ ಗಚ್ಚಿಬೌಲಿಯಲ್ಲಿರುವ ಫೇಸ್ಬುಕ್ ಮಾತೃಸಂಸ್ಥೆ ಮೆಟಾ (Meta) ಕಚೇರಿಯ ಮೇಲೆ ದಾಳಿ ನಡೆಸಿ ದಾಂಧಲೆ ನಡೆಸಿದ್ದಾರೆ.
ತೆಲಂಗಾಣ ಯುವ ಕಾಂಗ್ರೆಸ್ ಅಧ್ಯಕ್ಷ ಜಕ್ಕಿಡಿ ಶಿವಚರಣ್ ರೆಡ್ಡಿ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, ಮೆಟಾ ಸಂಸ್ಥೆ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ತಡೆಹಿಡಿಯಲಾದ ಪೋಸ್ಟ್ಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಈ ವೇಳೆ ಕಚೇರಿಯ ಕಾರಿಡಾರ್ ಹಾಗೂ ಕೆಫೆಟೇರಿಯಾ ಬಳಿ ನುಗ್ಗಿದ ಕಾರ್ಯಕರ್ತರು, ಕಚೇರಿ ಆವರಣದಲ್ಲಿದ್ದ ಹೂವಿನ ಕುಂಡಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ‘ಎಕ್ಸ್’ (X) ಖಾತೆಯಲ್ಲಿ ಪೋಸ್ಟ್ ಮಾಡಿರುವ ಭಾರತೀಯ ಯುವ ಕಾಂಗ್ರೆಸ್, ನಿರ್ಬಂಧಿತ ಖಾತೆಗಳು ಮತ್ತು ಪೋಸ್ಟ್ಗಳನ್ನು ಮರುಸ್ಥಾಪಿಸಲು ಮೆಟಾ ಸಂಸ್ಥೆಗೆ ಏಳು ದಿನಗಳ ಗಡುವು ನೀಡಿದೆ. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ನ್ಯಾಯಾಲಯ, ಬೀದಿ ಹಾಗೂ ಕಚೇರಿಗಳ ಮುಂದೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.
ಮುಂಬೈನಲ್ಲೂ ಭುಗಿಲೆದ್ದ ಪ್ರತಿಭಟನೆ
ಹೈದರಾಬಾದ್ ಘಟನೆಯ ಬೆನ್ನಲ್ಲೇ, ಮುಂಬೈನ ಬಿಕೆಸಿ (BKC) ಪ್ರದೇಶದಲ್ಲಿರುವ ಮೆಟಾ ಕಚೇರಿಯ ಹೊರಗೂ ಮುಂಬೈ ಯುವ ಕಾಂಗ್ರೆಸ್ ಅಧ್ಯಕ್ಷೆ ಜೀನತ್ ಶಬ್ರಿನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧದ ಟೀಕೆಗಳನ್ನು ಹತ್ತಿಕ್ಕಲು ಮೆಟಾ ಸಂಸ್ಥೆ ಕೇಂದ್ರ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು. ಅಲ್ಲದೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರ ಭಾವಚಿತ್ರವನ್ನು ಸುಟ್ಟು ಆಕ್ರೋಶ ಹೊರಹಾಕಿದರು.
ರಾಜಕೀಯ ಕೆಸರೆರಚಾಟ
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ವಿದೇಶಿ ಕಂಪನಿಗಳು ಭಾರತದಲ್ಲಿ ವ್ಯಾಪಾರ ಮಾಡಬೇಕೇ ಹೊರತು ರಾಜಕೀಯವನ್ನಲ್ಲ ಎಂದು ಮೆಟಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲರನ್ನೂ ಸಮಾನವಾಗಿ ಕಾಣುವುದು ಉತ್ತಮ ಕಂಪನಿಯ ಲಕ್ಷಣವಾಗಿದ್ದು, ಸರ್ಕಾರ ಕೂಡ ವಿದೇಶಿ ಕಂಪನಿಗಳ ಮೇಲೆ ಅನಗತ್ಯ ಒತ್ತಡ ಹೇರಿ ಅವುಗಳ ವ್ಯವಹಾರವನ್ನು ರಾಜಕೀಯಗೊಳಿಸಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಂದೆಡೆ, ಮೆಟಾ ಕಚೇರಿ ಮೇಲಿನ ದಾಳಿಯನ್ನು ಬಿಜೆಪಿ ಹಾಗೂ ಬಿಆರ್ಎಸ್ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಕಾಂಗ್ರೆಸ್ ಪಕ್ಷವನ್ನು “ಗೂಂಡಾಗಳ ಪಕ್ಷ” ಎಂದು ಕರೆದಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ಖಾಸಗಿ ಕಂಪನಿಗಳ ಕಚೇರಿಗಳನ್ನು ಧ್ವಂಸಗೊಳಿಸುವುದು ಮತ್ತು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸುವುದು ಕಾಂಗ್ರೆಸ್ ಮಾದರಿಯಾಗಿದೆ ಎಂದು ಟೀಕಿಸಿದ್ದಾರೆ. ಬಿಆರ್ಎಸ್ ನಾಯಕ ಕೆ.ಟಿ. ರಾಮರಾವ್ ಕೂಡ ಈ ಘಟನೆಯನ್ನು ಖಂಡಿಸಿದ್ದು, ದಶಕಗಳಿಂದ ಕಟ್ಟಿದ ‘ಬ್ರಾಂಡ್ ಹೈದರಾಬಾದ್’ ನಂಬಿಕೆಗೆ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ ಧಕ್ಕೆ ತಂದಿದೆ ಎಂದಿದ್ದಾರೆ.



















