ಪಿಂಕ್ ಲೈನ್‌ನ 7.5 ಕಿ.ಮೀ. ಮಾರ್ಗ ಲೋಕಾರ್ಪಣೆಯಾಗುತ್ತಿದ್ದಂತೆ ಬೆಂಗಳೂರು ಮೆಟ್ರೋ ಒಟ್ಟು 103.6 ಕಿ.ಮೀ. ಜಾಲದೊಂದಿಗೆ ಮುಂಬೈಯನ್ನು ಹಿಂದಿಕ್ಕಿ ದೇಶದಲ್ಲೇ ಎರಡನೇ ಸ್ಥಾನಕ್ಕೇರಲಿದೆ. ದೆಹಲಿ ಮೆಟ್ರೋ 374.5 ಕಿ.ಮೀ. ಜಾಲದೊಂದಿಗೆ ಮೊದಲ ಸ್ಥಾನದಲ್ಲಿದೆ. ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರದವರೆಗಿನ ಈ ಮಾರ್ಗದಲ್ಲಿ 6 ನಿಲ್ದಾಣಗಳಿದ್ದು, 3,470 ಕೋಟಿ ರೂ. ವೆಚ್ಚವಾಗಿದೆ.
ನವೆಂಬರ್ 14ರ ಬೆಳಗ್ಗೆ 6ರಿಂದ ವಾಣಿಜ್ಯ ಸಂಚಾರ ಆರಂಭವಾಗಲಿದ್ದು, 5 ರೈಲುಗಳು ಸುಮಾರು 8 ನಿಮಿಷಕ್ಕೊಂದರಂತೆ ಸಂಚರಿಸಲಿವೆ. ಸಂಪೂರ್ಣ ಪಿಂಕ್ ಲೈನ್ 21.26 ಕಿ.ಮೀ. ಉದ್ದವಿದ್ದು, 12 ಅಂಡರ್ಗ್ರೌಂಡ್ ಹಾಗೂ 6 ಎಲಿವೇಟೆಡ್ ನಿಲ್ದಾಣಗಳನ್ನು ಹೊಂದಿರಲಿದೆ. ಬಿಇಎಂಎಲ್ ನಿರ್ಮಿತ ಚಾಲಕರಹಿತ ರೈಲುಗಳು 90 ಕಿ.ಮೀ. ಗರಿಷ್ಠ ವೇಗ ಹಾಗೂ 2,008 ಪ್ರಯಾಣಿಕರ ಸಾಮರ್ಥ್ಯ ಹೊಂದಿವೆ.
















