ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬುಧವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಓಲ್ಡ್ ಕೊತ್ವಾಲಿ ಠಾಣೆ ವ್ಯಾಪ್ತಿಯ ಬಗಾಡಿಯಾ ಟವರ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ಐದು ಅಂತಸ್ತಿನ ವಸತಿ ಮತ್ತು ವಾಣಿಜ್ಯ ಕಟ್ಟಡವಾಗಿದೆ. ಕಟ್ಟಡದ ಮೂರನೇ ಮಹಡಿಯಲ್ಲಿ ‘ಗರುಡ ಪುರಾಣ’ ಕಾರ್ಯಕ್ರಮಕ್ಕೆ ಜನರು ಸೇರಿದ್ದಾಗ ಈ ಅವಘಡ ಸಂಭವಿಸಿದೆ. ಕಟ್ಟಡದ ಔಷಧಾಲಯದಿಂದಲೇ ಬೆಂಕಿ ಹರಡಿರುವ ಸಾಧ್ಯತೆಯಿದೆ.
ಮಹಿಳೆಯರು ಸೇರಿದಂತೆ ಕನಿಷ್ಠ 10ರಿಂದ 15 ಮಂದಿ ಒಳಗೆ ಸಿಲುಕಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ 6 ಅಗ್ನಿಶಾಮಕ ವಾಹನಗಳು ಧಾವಿಸಿವೆ. ಪುರಸಭೆ, ಪೊಲೀಸ್ ಮತ್ತು ಎಸ್ಡಿಆರ್ ಎಫ್ ತಂಡಗಳು ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಏಣಿಯ ಸಹಾಯದಿಂದ ಈಗಾಗಲೇ ಕೆಲವರನ್ನು ರಕ್ಷಿಸಲಾಗಿದೆ. ಕಟ್ಟಡ ಮೇಲಿನ ಮಹಡಿಯಲ್ಲಿ ಸಿಲುಕಿರುವವರ ಜೊತೆ ಪೊಲೀಸ್ ಸಿಬ್ಬಂದಿ ಇದ್ದಾರೆ. ಕಿರಿದಾದ ಗಲ್ಲಿಯಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಜಿಲ್ಲಾಧಿಕಾರಿ ರೋಷನ್ ಕುಮಾರ್ ಸಿಂಗ್ ಹಾಗೂ ಎಸ್ಪಿ ಪ್ರದೀಪ್ ಶರ್ಮಾ ಸ್ಥಳಕ್ಕೆ ಭೇಟಿ ನೀಡಿದ್ದು, ಡ್ರೋನ್ ಮೂಲಕ ನಿಗಾ ವಹಿಸಲಾಗಿದೆ.


















