ಆರೋಪಿ ಶೇಖರ ಏಳು ಜನರ ಹತ್ಯೆಗೆ ಖತರ್ನಾಕ್ ಪ್ಲ್ಯಾನ್ ಮಾಡಿದ್ದ ಕಟುಕತನ ಬಯಲಾಗಿದೆ. ಕೊಲೆಗಾಗಿ ಆತ ಸುತ್ತಮುತ್ತಲಿನ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸಿದ್ದಾನೆ. ಯಶವಂತಪುರ ಹಾಗೂ ಆರ್‌ಎಂಸಿ ಯಾರ್ಡ್ ಅಂಗಡಿಗಳಲ್ಲಿ ಮೃತದೇಹಗಳನ್ನು ಪ್ಯಾಕ್ ಮಾಡಲು ಟೇಪ್, ಕೆಮಿಕಲ್ ಮತ್ತು ಗೋಣಿಚೀಲಗಳನ್ನು ಪಡೆದುಕೊಂಡಿದ್ದನು. ಸದ್ಯ ಪೊಲೀಸರು ಬರೋಬ್ಬರಿ 200 ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
ಅಕ್ಟೋಬರ್ 14 ರಿಂದ ನವೆಂಬರ್ 13 ರವರೆಗಿನ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಕೊಲೆಯಾದ ಏರಿಯಾದಲ್ಲಿ ಹಾಗೂ ಅಕ್ಟೋಬರ್ 24 ರ ಹಿಂದಿನ ದಿನಗಳ ಸಿಸಿಟಿವಿ ದೃಶ್ಯಗಳು ತಾಂತ್ರಿಕ ಸಮಸ್ಯೆಯಿಂದಾಗಿ ಸರಿಯಾಗಿ ಸಿಕ್ಕಿಲ್ಲ. ನಿನ್ನೆ ಚಾಮುಂಡಿಬೆಟ್ಟದ ಮುಖ್ಯರಸ್ತೆಯ ಪಕ್ಕದ ಕಂದಕದಲ್ಲಿ ಶಿವಕುಮಾರ್ ಮತ್ತು ದಿವ್ಯಾ ಎಂಬುವವರ ಎರಡು ಮೃತದೇಹಗಳು ಪತ್ತೆಯಾಗಿವೆ. ಪೊಲೀಸರು ಈಗ ಇನ್ನುಳಿದ ಎರಡು ಶವಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

















