ನವದೆಹಲಿ: ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ಹಣ ಪಾವತಿಸಲು ಇನ್ನು ಮುಂದೆ ಆಧಾರ್ ಕಾರ್ಡ್ ಬದಲಿಗೆ ವೋಟರ್ ಐಡಿ ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಕೇಂದ್ರ ಪಂಚಾಯತ್ ರಾಜ್ ಹಾಗೂ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್) ಈ ಸುಳಿವು ನೀಡಿದ್ದಾರೆ.
ಸಚಿವರು ಹೇಳಿದ್ದೇನು?
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ರಾಜೀವ್ ರಂಜನ್ ಸಿಂಗ್, ಪ್ರಸ್ತುತ ಆಧಾರ್ ಕಾರ್ಡ್ ಗಳು ಅತ್ಯಂತ ಸುಲಭವಾಗಿ ಲಭ್ಯ ಇವೆ. ಕೆಲವೇ ನಿಮಿಷಗಳಲ್ಲಿ ಯಾರಿಗೆ ಬೇಕಾದರೂ ಹೊಸ ಆಧಾರ್ ಕಾರ್ಡ್ ಮಾಡಿಸಬಹುದಾಗಿದೆ. ಹೀಗಾಗಿ, ಕಲ್ಯಾಣ ಯೋಜನೆಗಳ ಫಲಾನುಭವಿಗಳ ಗುರುತಿಸುವಿಕೆಗೆ ಆಧಾರ್ ಮಾತ್ರ ಇನ್ನುಮುಂದೆ ಮುಖ್ಯ ದಾಖಲೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
“ಆಧಾರ್ ಕಾರ್ಡ್ ಗಳು ಎಲ್ಲೆಡೆ ಲಭ್ಯವಿವೆ ಮತ್ತು ಕೆಲವೇ ನಿಮಿಷಗಳಲ್ಲಿ ಪಡೆದುಕೊಳ್ಳಬಹುದು. ಆದ್ದರಿಂದ ಆಧಾರ್ ಕಾರ್ಡ್ ಫಲಾನುಭವಿಗಳನ್ನು ಗುರುತಿಸಲು ಮಾನದಂಡವಾಗುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರ ಬದಲಿಗೆ ಫಲಾನುಭವಿಗಳು ತಮ್ಮ ವೋಟರ್ ಐಡಿ (EPIC) ಕಾರ್ಡ್ ಸಂಖ್ಯೆ ಮತ್ತು ಬಯೋಮೆಟ್ರಿಕ್ (ಬೆರಳಚ್ಚು ಅಥವಾ ಕಣ್ಣಿನ) ದೃಢೀಕರಣವನ್ನು ಒದಗಿಸಬೇಕಾಗುತ್ತದೆ. ಈ ಎರಡು ದಾಖಲೆಗಳ ಮೂಲಕವೇ ನೇರ ಪಾವತಿ ಯೋಜನೆಗಳ ಲಾಭ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.
ಯಾವ ಯೋಜನೆಗಳಿಗೆ ಅನ್ವಯ?
ಸಚಿವರು ಈ ಹೊಸ ಬದಲಾವಣೆಯ ಬಗ್ಗೆ ಸುಳಿವು ನೀಡಿದ್ದರೂ, ನಿರ್ದಿಷ್ಟವಾಗಿ ಯಾವೆಲ್ಲ ಕಲ್ಯಾಣ ಯೋಜನೆಗಳಿಗೆ ಈ ನಿಯಮ ಅನ್ವಯವಾಗಲಿದೆ ಎಂಬ ಬಗ್ಗೆ ಯಾವುದೇ ಸ್ಪಷ್ಟ ವಿವರಗಳನ್ನು ನೀಡಿಲ್ಲ. ಪ್ರಸ್ತುತ ಪಿಎಂ-ಕಿಸಾನ್, ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗೂ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಲ್ಲಿ ಫಲಾನುಭವಿಗಳ ಪರಿಶೀಲನೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಕರ್ನಾಟಕದ ಗ್ಯಾರಂಟಿ ಯೋಜನೆಗಳಿಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.

















