ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಸಲ್ಲಿಸಿರುವ ಫಿಸಿಯೋಥೆರಪಿ ಹಾಗೂ ವೈದ್ಯಕೀಯ ಚಿಕಿತ್ಸೆ ಕೋರಿದ ಅರ್ಜಿಯ ವಿಚಾರಣೆ ಇಂದು ಕೋರ್ಟ್ನಲ್ಲಿ ನಡೆಯಲಿದೆ. ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಲಿದ್ದು, ದರ್ಶನ್ ಕಳೆದ 12 ವರ್ಷಗಳಿಂದ ಬೆನ್ನುಹುರಿಯ ಎಲ್4 ಮತ್ತು ಎಲ್5 ಸಮಸ್ಯೆಯಿಂದ ಬಳಲುತ್ತಿದ್ದಾರೆ ಹಾಗೂ ಇದಕ್ಕಾಗಿ ಸ್ಟಿರಾಯ್ಡ್ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
2024ರಲ್ಲೂ ಜೈಲಿನಲ್ಲಿದ್ದಾಗ ವೈದ್ಯರು ಈ ಬಗ್ಗೆ ವರದಿ ನೀಡಿದ್ದರು ಎನ್ನಲಾಗಿದೆ. ಕಳೆದ ವರ್ಷ ಚಳಿಗಾಲದಲ್ಲಿ ಈ ಬೆನ್ನುನೋವು ತೀವ್ರವಾಗಿ ಹೆಚ್ಚಾಗಿತ್ತು ಮತ್ತು ಪ್ರಸ್ತುತ ಜೈಲಿನಲ್ಲಿ ನೆಲದ ಮೇಲೆ ಮಲಗುತ್ತಿರುವುದರಿಂದ ನೋವು ಮತ್ತಷ್ಟು ಉಲ್ಬಣಿಸಿದೆ ಎಂದು ವಾದಾವಳಿಯಲ್ಲಿ ಉಲ್ಲೇಖಿಸಲಾಗಿದೆ.



















