ಖಾಸಗಿ ಸ್ವತ್ತು ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರ್ ಖಂಡ್ರೆ ವಿರುದ್ಧ ಖಾಸಗಿ ಕ್ರಿಮಿನಲ್ ದೂರು (Private Criminal Complaint) ದಾಖಲಿಸಿ ನ್ಯಾಯಾಂಗ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಲಾಗಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪುರಸಭೆ ವ್ಯಾಪ್ತಿಯ ವಾರ್ಡ್ ನಂ.17ರಲ್ಲಿ ಅರ್ಜಿದಾರರ ಹೆಸರಿನಲ್ಲಿ ನೋಂದಾಯಿತ ಕ್ರಯಪತ್ರ ಹಾಗೂ ನಮೂನೆ-3 (A-Register) ಖಾತೆ ಅಸ್ತಿತ್ವದಲ್ಲಿರುವ ಖಾಸಗಿ ಸ್ವತ್ತನ್ನು ಅತಿಕ್ರಮಿಸಿ, ಅಖಿಲ ಭಾರತ ವೀರಶೈವ ಮಹಾಸಭಾದ ಕಚೇರಿ ನಿರ್ಮಿಸಲಾಗಿದೆ. ಈ ಸ್ವತ್ತಿಗೆ ಸಂಬಂಧಿಸಿದಂತೆ ನಿಯಮಬಾಹಿರವಾಗಿ ಎರಡನೇ ಖಾತೆ ಸೃಷ್ಟಿಸಿರುವ ಪ್ರಕರಣದಲ್ಲಿ, ಸಚಿವ ಈಶ್ವರ ಬಿ. ಖಂಡ್ರೆ ಅವರ ನೇರ ಹಸ್ತಕ್ಷೇಪ, ರಾಜಕೀಯ ಪ್ರಭಾವ, ಸೂಚನೆ, ಶಿಫಾರಸು ಅಥವಾ ಕುಮ್ಮಕ್ಕು ಇದೆ ಎಂಬ ಆರೋಪ ಕೇಳಿ ಬಂದಿದೆ. ಸಚಿವರು ಸಂಬಂಧಪಟ್ಟ ಪುರಸಭೆಯ ಅಧಿಕಾರಿಗಳ ಮೂಲಕ ನಿಯಮಬಾಹಿರವಾಗಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಸಚಿವರು ನ.4ರಂದು ಈ ಜಮೀನಿನಲ್ಲಿ ಕಚೇರಿಯನ್ನು ಸಚಿವರು ಉದ್ಘಾಟಿಸಿರುವ ಹಿನ್ನೆಲೆಯಲ್ಲಿ, ಅವರ ವೈಯಕ್ತಿಕ ಪಾತ್ರ, ಪೂರ್ವಜ್ಞಾನ ಮತ್ತು ಆಡಳಿತಾತ್ಮಕ ಹಸ್ತಕ್ಷೇಪ ಬಗ್ಗೆ ಅನುಮಾನಗಳಿವೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ಕಾನೂನುಬದ್ಧ ತನಿಖೆ ಮಾಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಚಿವರ ವಿರುದ್ಧ ಖಾಸಗಿ ಕ್ರಿಮಿನಲ್ ದೂರು (Private Criminal Complaint) ದಾಖಲಿಸಿ ನ್ಯಾಯಾಂಗ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಭ್ರಷ್ಟಾಚಾರ ತಡೆ ಕಾಯ್ದೆ, 1988ರ ಸೆಕ್ಷನ್ 17Aರ ಅಡಿಯಲ್ಲಿ ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ ಸೆಕ್ಷನ್ 218ರ ಅಡಿಯಲ್ಲಿ ಅಗತ್ಯವಿರುವ ಅನುಮತಿ ಕೋರಿ ಮನವಿ ಸಲ್ಲಿಸಲಾಗಿದೆ.


















