ಹಾಸನದ ಹಾಸನಾಂಬೆ ದರ್ಶನಕ್ಕೆ ಎರಡನೇ ದಿನವೂ ಭಕ್ತ ಸಾಗರವೇ ಹರಿದು ಬಂದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ದೇವಸ್ಥಾನದ ಎಲ್ಲಾ ಸರತಿ ಸಾಲುಗಳು ಭರ್ತಿಯಾಗಿವೆ. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ.
ನಿನ್ನೆ ಸಂಜೆ 7 ಗಂಟೆಯಿಂದ ಇಂದು ಬೆಳಗ್ಗೆ 6 ಗಂಟೆಯವರೆಗೂ ನೈವೇದ್ಯಕ್ಕೆ ಅವಕಾಶ ನೀಡಲಾಗಿತ್ತು. ತದನಂತರ ಇಂದು ಬೆಳಗ್ಗೆ 6 ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದು ಮಧ್ಯಾಹ್ನ 1 ಗಂಟೆಯಿಂದ 2 ಗಂಟೆಯವರೆಗೂ ಮತ್ತೆ ನೈವೇದ್ಯಕ್ಕೆ ಅವಕಾಶ ನೀಡಲಾಗುತ್ತಿದ್ದು, ಈ ಒಂದು ಗಂಟೆ ಹೊರತುಪಡಿಸಿ ಬೆಳಗಿನ ಜಾವ 3 ಗಂಟೆಯವರೆಗೂ ನಿರಂತರವಾಗಿ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ.



















