ಬೆಂಗಳೂರು: ಹಣಕಾಸಿನ ತುರ್ತು ಪರಿಸ್ಥಿತಿ ಎದುರಾದಾಗ, ಸಾರ್ವಜನಿಕ ಭವಿಷ್ಯ ನಿಧಿ (PPF) ಮೇಲಿನ ಸಾಲ ಅಥವಾ ವೈಯಕ್ತಿಕ ಸಾಲ (Personal Loan) ಪಡೆಯುವುದು ಜನರಿಗೆ ಸಾಮಾನ್ಯ ಆಯ್ಕೆಗಳಾಗಿವೆ. ಆದರೆ ಈ ಎರಡರ ಬಡ್ಡಿ ದರಗಳು, ಮರುಪಾವತಿ ನಿಯಮಗಳು ಮತ್ತು ಅರ್ಹತೆಯಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಇವುಗಳನ್ನು ತಿಳಿದುಕೊಂಡರೆ ನಿಮಗೆ ಯಾವ ಸಾಲ ಸೂಕ್ತ ಎಂಬುದು ಗೊತ್ತಾಗುತ್ತದೆ. ನೀವು ಕಡಿಮೆ ವೆಚ್ಚದಲ್ಲಿ ಅಲ್ಪಾವಧಿಗೆ ಸಾಲ ಮರುಪಾವತಿಸಲು ಬಯಸಿದರೆ ಪಿಪಿಎಫ್ ಸಾಲ ಉತ್ತಮ ಆಯ್ಕೆಯಾಗಿದೆ. ಹೆಚ್ಚು ಹಣದ ಅವಶ್ಯಕತೆ ಇದ್ದರೆ ಮತ್ತು ಪಿಪಿಎಫ್ ಖಾತೆ ಇಲ್ಲದಿದ್ದರೆ ಪರ್ಸನಲ್ ಲೋನ್ ಪರಿಗಣಿಸಬಹುದು.
ಬಡ್ಡಿ ದರ ಮತ್ತು ವೆಚ್ಚ
ಪ್ರಸ್ತುತ ಪಿಪಿಎಫ್ ಮೇಲಿನ ಸಾಲದ ಬಡ್ಡಿ ದರವು ವಾರ್ಷಿಕ ಶೇ.1 ರಷ್ಟಿದೆ. ಆದರೆ ಸಾಲದಾತ ಸಂಸ್ಥೆಗಳು ನೀಡುವ ಪರ್ಸನಲ್ ಲೋನ್ ಬಡ್ಡಿ ದರವು ವಾರ್ಷಿಕ ಶೇ.8.90 ರಿಂದ ಶೇ.14ರವರೆಗೆ ಇರುತ್ತದೆ. ಇದು ಗ್ರಾಹಕರ ಕ್ರೆಡಿಟ್ ಸ್ಕೋರ್ ಮತ್ತು ಆದಾಯವನ್ನು ಅವಲಂಬಿಸಿ ಬದಲಾಗುತ್ತದೆ.
ಪಿಪಿಎಫ್ ವರ್ಸಸ್ ಪರ್ಸನಲ್ ಲೋನ್
ಅರ್ಹತೆ: ಪಿಪಿಎಫ್ ಸಾಲವನ್ನು ಪಿಪಿಎಫ್ ಖಾತೆದಾರರು ಮಾತ್ರ ಪಡೆಯಬಹುದು. ಆದರೆ ಪರ್ಸನಲ್ ಲೋನ್ ಅನ್ನು ನಿಯಮಗಳಿಗೆ ಒಳಪಟ್ಟು ವೇತನದಾರರು ಮತ್ತು ಸ್ವಯಂ ಉದ್ಯೋಗಿಗಳು ಪಡೆಯಬಹುದು.
ಸಾಲದ ಮೊತ್ತ: ಪಿಪಿಎಫ್ ಖಾತೆಯಲ್ಲಿರುವ ಅರ್ಹ ಮೊತ್ತದ ಶೇ.25ರವರೆಗೆ ಸಾಲ ಪಡೆಯಬಹುದು. ಪರ್ಸನಲ್ ಲೋನ್ ಮೊತ್ತವು ಆದಾಯ ಮತ್ತು ಕ್ರೆಡಿಟ್ ಪ್ರೊಫೈಲ್ ಅನ್ನು ಅವಲಂಬಿಸಿರುತ್ತದೆ.
ಮರುಪಾವತಿ ಅವಧಿ: ಪಿಪಿಎಫ್ ಸಾಲದ ಅಸಲನ್ನು 36 ತಿಂಗಳೊಳಗೆ ಮರುಪಾವತಿಸಬೇಕು. ಪರ್ಸನಲ್ ಲೋನ್ ಮರುಪಾವತಿ ಅವಧಿ ಸಾಮಾನ್ಯವಾಗಿ 1 ರಿಂದ 7 ವರ್ಷಗಳವರೆಗೆ ಇರುತ್ತದೆ.
ಮರುಪಾವತಿ ವಿಧಾನ: ಪಿಪಿಎಫ್ ಸಾಲದಲ್ಲಿ ಮೊದಲು ಅಸಲು ಮತ್ತು ನಂತರ ಬಡ್ಡಿ ಪಾವತಿಸಬೇಕಾಗುತ್ತದೆ. ಪರ್ಸನಲ್ ಲೋನ್ ನಲ್ಲಿ ಮಾಸಿಕ ಇಎಂಐ ಮೂಲಕ ಅಸಲು ಮತ್ತು ಬಡ್ಡಿ ಎರಡೂ ಸೇರಿ ಪಾವತಿಯಾಗುತ್ತದೆ.
ಇದನ್ನೂ ಓದಿ:EMI ಪಾವತಿ 1 ದಿನ ತಡವಾದರೂ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ? RBI ನಿಯಮ ಏನು?



















