ಬೆಂಗಳೂರು: ನಿಮ್ಮ ಸಾಲದ ಮಾಸಿಕ ಇಎಂಐ (EMI) ಪಾವತಿಯನ್ನು ಕೇವಲ ಒಂದೇ ಒಂದು ದಿನ ತಡ ಮಾಡಿದರೂ ಅದು ನಿಮ್ಮ ಖಾತೆಯನ್ನು ‘ಓವರ್ ಡ್ಯೂ’ (ಬಾಕಿ) ಎಂದು ಪರಿಗಣಿಸಲು ಕಾರಣವಾಗಬಹುದು ಮತ್ತು ದಂಡದ ಶುಲ್ಕಕ್ಕೆ (Late Payment Charges) ಗುರಿಯಾಗಬಹುದು. ಆದರೆ, ಇದರಿಂದ ತಕ್ಷಣವೇ ನಿಮ್ಮ ಕ್ರೆಡಿಟ್ ಸ್ಕೋರ್ ಕುಸಿಯುತ್ತದೆ ಎಂದರ್ಥವಲ್ಲ. ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮಗಳಿವೆ.
ಆರ್ ಬಿಐ ನಿಯಮಗಳ ಪ್ರಕಾರ, ನಿಗದಿತ ದಿನಾಂಕದಂದು ಇಎಂಐ ಪಾವತಿಯಾಗದಿದ್ದರೆ, ಆ ದಿನದ ಅಂತ್ಯಕ್ಕೆ ಸಾಲದಾತರು ಆ ಖಾತೆಯನ್ನು ಓವರ್ ಡ್ಯೂ ಎಂದು ವರ್ಗೀಕರಿಸುತ್ತಾರೆ. ಆದರೆ ಒಂದು ದಿನದ ತಡವಾದ ತಕ್ಷಣ ಕ್ರೆಡಿಟ್ ಸ್ಕೋರ್ ತಕ್ಷಣವೇ ಕುಸಿಯುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಇದು ಸಾಲದಾತರ ನೀತಿಗಳು, ತಡವಾದ ಅವಧಿ ಮತ್ತು ಗ್ರಾಹಕರ ಹಿಂದಿನ ಮರುಪಾವತಿ ಇತಿಹಾಸವನ್ನು ಅವಲಂಬಿಸಿರುತ್ತದೆ.
ದಂಡ ವಿಧಿಸಬಹುದೇ?
ಒಂದು ದಿನದ ವಿಳಂಬಕ್ಕೆ ಕೆಲವೊಮ್ಮೆ ಬ್ಯಾಂಕ್ ಗಳು ಅಥವಾ ಸಾಲದ ಸಂಸ್ಥೆಗಳು ಗ್ರೇಸ್ ಪಿರಿಯಡ್ ನೀಡಬಹುದು. ಆದರೆ ಇದರರ್ಥ ದಂಡದ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಸಿಗುತ್ತದೆ ಎಂದಲ್ಲ. ಬ್ಯಾಂಕ್ ಒಪ್ಪಂದದ ನಿಯಮಗಳ ಪ್ರಕಾರ ದಂಡ ವಿಧಿಸುವ ಹಕ್ಕಿರುತ್ತದೆ. ಆರ್ ಬಿಐ ನಿಯಮಗಳ ಪ್ರಕಾರ ಈ ದಂಡವು ಸಮಂಜಸವಾಗಿರಬೇಕು ಮತ್ತು ಅದನ್ನು ಸಾಲದ ಅಸಲಿಗೆ ಸೇರಿಸಿ ಮತ್ತಷ್ಟು ಬಡ್ಡಿ ವಿಧಿಸುವಂತಿಲ್ಲ.
ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಯಾವಾಗ ಬೀರುತ್ತದೆ?
ಒಂದು ದಿನದ ವಿಳಂಬವು ದೊಡ್ಡ ಮಟ್ಟದ ಪರಿಣಾಮ ಬೀರದಿದ್ದರೂ, ಪದೇಪದೆ ಇಎಂಐ ಪಾವತಿ ತಡವಾದರೆ ಕ್ರೆಡಿಟ್ ಸ್ಕೋರ್ ಖಂಡಿತವಾಗಿಯೂ ಕುಸಿಯುತ್ತದೆ. ಆರ್ ಬಿಐ ನಿಯಮಗಳ ಪ್ರಕಾರ, ಸಾಲದಾತರು ಪ್ರತಿ 15 ದಿನಗಳಿಗೊಮ್ಮೆ ಕ್ರೆಡಿಟ್ ಬ್ಯೂರೋಗಳಿಗೆ ಗ್ರಾಹಕರ ಮರುಪಾವತಿ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು. ಪಾವತಿಯು 30 ದಿನಗಳಿಗಿಂತ ಹೆಚ್ಚು ಕಾಲ ಬಾಕಿ ಉಳಿದುಕೊಂಡರೆ ಮಾತ್ರ ಅದು ಕ್ರೆಡಿಟ್ ಪ್ರೊಫೈಲ್ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ.
ಗ್ರಾಹಕರು ಏನು ಮಾಡಬೇಕು?
ಇಎಂಐ ಪಾವತಿ ತಪ್ಪಿದ ಕೂಡಲೇ, ಯಾವುದೇ ದಂಡ ಅಥವಾ ಕ್ರೆಡಿಟ್ ಸ್ಕೋರ್ ಹಾನಿಯನ್ನು ತಡೆಯಲು ಕೂಡಲೇ ಬಾಕಿ ಹಣವನ್ನು ಪಾವತಿಸುವುದು ಉತ್ತಮ. ಆಟೋ ಡೆಬಿಟ್ ವಿಫಲವಾಗಿದ್ದರೆ, ತಕ್ಷಣವೇ ಬ್ಯಾಂಕ್ ಅನ್ನು ಸಂಪರ್ಕಿಸಿ ಬಾಕಿ ಪಾವತಿಸುವುದು ಮತ್ತು ಕ್ರೆಡಿಟ್ ವರದಿಯಲ್ಲಿ ಯಾವುದೇ ದೋಷವಿದ್ದರೆ ದೂರು ದಾಖಲಿಸುವುದು ಸೂಕ್ತ.
ಇದನ್ನೂ ಓದಿ:ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ ಕನ್ಸಲ್ಟಂಟ್ ಹುದ್ದೆಗಳ ನೇಮಕಾತಿ: 1.5 ಲಕ್ಷ ರೂ. ಸ್ಯಾಲರಿ



















