ಬೆಲ್ಗ್ರೇಡ್: ಜಗತ್ತಿನ ಹಲವಾರು ದೇಶಗಳಲ್ಲಿ ಯುವಜನತೆ ಮತ್ತು ವಿದ್ಯಾರ್ಥಿ ಚಳವಳಿಗಳು ತೀವ್ರಗೊಳ್ಳುತ್ತಿರುವಂತೆಯೇ, ಯುರೋಪ್ನ ಸಣ್ಣ ರಾಷ್ಟ್ರವಾದ ಸರ್ಬಿಯಾದಲ್ಲಿ ಹೊಸ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಕಳೆದ ಒಂದು ದಶಕದಿಂದ ದೇಶದ ರಾಜಕೀಯದಲ್ಲಿ ಅಧಿಪತ್ಯ ಸಾಧಿಸಿದ್ದ ಅಧ್ಯಕ್ಷ ಅಲೆಕ್ಸಾಂಡರ್ ವುಚಿಕ್ ಅವರು ವಿದ್ಯಾರ್ಥಿ ನೇತೃತ್ವದ ಹೋರಾಟಕ್ಕೆ ಸೋಲೊಪ್ಪಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಸಂಸತ್ ಚುನಾವಣೆಯಲ್ಲಿ ವಿದ್ಯಾರ್ಥಿ ಬೆಂಬಲಿತ ‘ಸ್ಟೂಡೆಂಟ್ ಲಿಸ್ಟ್’ ಪಕ್ಷವು ಅಭೂತಪೂರ್ವ ಜಯಗಳಿಸಿದ್ದು, ವುಚಿಕ್ ತಮ್ಮ ಸೋಲನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಈ ಐತಿಹಾಸಿಕ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಾಜಧಾನಿ ಬೆಲ್ಗ್ರೇಡ್ ಸೇರಿದಂತೆ ದೇಶಾದ್ಯಂತ ಲಕ್ಷಾಂತರ ಜನರು ರಸ್ತೆಗಿಳಿದು ಸಂಭ್ರಮಾಚರಣೆ ನಡೆಸಿದ್ದಾರೆ.
ಪ್ರತಿಭಟನೆಯ ಕಿಚ್ಚಿನಿಂದ ಹುಟ್ಟಿದ ರಾಜಕೀಯ ಸಂಘಟನೆ
2024ರಲ್ಲಿ ನೋವಿ ಸಾದ್ ರೈಲ್ವೆ ನಿಲ್ದಾಣದ ಮೇಲ್ಚಾವಣಿ ಕುಸಿದು 16 ಜನರು ಸಾವನ್ನಪ್ಪಿದ ಘಟನೆಯಿಂದಾಗಿ ಸರ್ಬಿಯಾದಲ್ಲಿ ಸರ್ಕಾರಿ ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯದ ವಿರುದ್ಧ ಸತತ ಎರಡು ವರ್ಷಗಳ ಕಾಲ ಬೃಹತ್ ವಿದ್ಯಾರ್ಥಿ ಪ್ರತಿಭಟನೆಗಳು ನಡೆದಿದ್ದವು. ಈ ಪ್ರತಿಭಟನೆಯ ತೀವ್ರತೆಯಿಂದಲೇ ‘ಸ್ಟೂಡೆಂಟ್ ಲಿಸ್ಟ್’ ಎಂಬ ಹೊಸ ರಾಜಕೀಯ ಚಳವಳಿ ಜನ್ಮತಾಳಿತು. ಹೆಸರು ವಿದ್ಯಾರ್ಥಿ ಸಂಘಟನೆಯದ್ದಾಗಿದ್ದರೂ, ಈ ಪಕ್ಷವು ನೇರವಾಗಿ ವಿದ್ಯಾರ್ಥಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ಬದಲಿಗೆ ಸಿವಿಲ್ ಸೊಸೈಟಿ ಸದಸ್ಯರು, ಪ್ರೊಫೆಸರ್ಗಳು, ನಟರು ಮತ್ತು ರೈತರನ್ನೊಳಗೊಂಡ 250 ಜನರ ತಂಡವನ್ನು ರಚಿಸಿತ್ತು. 56 ವರ್ಷದ ಹೃದಯತಜ್ಞ ಹಾಗೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಇಲಿಜಾ ಸ್ರ್ಡಾನೋವಿಕ್ ಈ ಒಕ್ಕೂಟದ ನೇತೃತ್ವ ವಹಿಸಿದ್ದರು. 250 ಸದಸ್ಯರ ಸಂಸತ್ತಿನಲ್ಲಿ ವಿದ್ಯಾರ್ಥಿ ಬೆಂಬಲಿತ ಪಡೆಗೆ 135 ರಿಂದ 140 ಸ್ಥಾನಗಳು ಸಿಗುವ ನಿರೀಕ್ಷೆಯಿದ್ದು, ವುಚಿಕ್ ಅವರ ‘ಸರ್ಬಿಯನ್ ಪ್ರೋಗ್ರೆಸಿವ್ ಪಾರ್ಟಿ’ ಕೇವಲ 105 ಸ್ಥಾನಗಳಿಗೆ ಕುಸಿದಿದೆ.
ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಯುವಕರ ಆಕ್ರೋಶ
ಸರ್ಬಿಯಾದ ಈ ಐತಿಹಾಸಿಕ ಬದಲಾವಣೆಯು ಕೇವಲ ಒಂದು ದೇಶಕ್ಕೆ ಸೀಮಿತವಾಗಿರದೆ, ಜಗತ್ತಿನಾದ್ಯಂತ ವಿದ್ಯಾರ್ಥಿ ಮತ್ತು ಯುವಶಕ್ತಿ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿರುವ ಕಾಲದಲ್ಲೇ ಸಂಭವಿಸಿದೆ. ಫ್ರಾನ್ಸ್ನಲ್ಲಿ ತರಗತಿಗಳ ಕೊರತೆ ಮತ್ತು ಹಣದುಬ್ಬರದ ವಿರುದ್ಧ 8 ಲಕ್ಷಕ್ಕೂ ಹೆಚ್ಚು ಯುವಕರು ಪ್ರತಿಭಟಿಸುತ್ತಿದ್ದರೆ, ಇಟಲಿ ಮತ್ತು ಅಲ್ಬೇನಿಯಾಗಳಲ್ಲಿ ಶಿಕ್ಷಣ ಭತ್ಯೆ, ಭ್ರಷ್ಟಾಚಾರ ಹಾಗೂ ಉದ್ಯೋಗ ಅಭದ್ರತೆ ವಿರುದ್ಧ ಲಕ್ಷಾಂತರ ಯುವಕರು ಬೀದಿಗಿಳಿದಿದ್ದಾರೆ. ಜರ್ಮನಿ, ಆಸ್ಟ್ರಿಯಾ ಮತ್ತು ಗ್ರೀಸ್ನಲ್ಲೂ ವಿದ್ಯಾರ್ಥಿ ಚಳವಳಿಗಳು ತೀವ್ರಗೊಂಡಿವೆ. ಅಂತೆಯೇ, ಭಾರತದಲ್ಲೂ 2026ರ ನೀಟ್ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ವಿರೋಧಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಯುವ ಸಂಘಟನೆಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗಳು ನಡೆದು, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಮುಂದಿರುವ ಸವಾಲುಗಳೇನು?
ಬೀದಿಗಿಳಿದು ಹೋರಾಟ ನಡೆಸಿದ ಯುವಶಕ್ತಿ ಈಗ ಯಶಸ್ವಿಯಾಗಿ ಆಡಳಿತ ಚುಕ್ಕಾಣಿ ಹಿಡಿಯುವ ಹಂತ ತಲುಪಿದೆ. ನೂತನವಾಗಿ ಅಧಿಕಾರಕ್ಕೆ ಬರಲಿರುವ ಆಡಳಿತವು ದೇಶದ ಪೊಲೀಸ್ ವ್ಯವಸ್ಥೆ, ಭದ್ರತಾ ಸಂಸ್ಥೆಗಳು ಮತ್ತು ಸಚಿವಾಲಯಗಳಲ್ಲಿ ಸಮಗ್ರ ಸುಧಾರಣೆ ತರುವ ಬಾರೀ ಒತ್ತಡದಲ್ಲಿದೆ. ಜೊತೆಗೆ ಭ್ರಷ್ಟಾಚಾರ ನಿರ್ಮೂಲನೆ, ಕಾನೂನು ಸುವ್ಯವಸ್ಥೆ ಬಲಪಡಿಸುವುದು ಮತ್ತು ಚೀನಾ, ರಷ್ಯಾ ಹಾಗೂ ಐರೋಪ್ಯ ಒಕ್ಕೂಟದಂತಹ ಜಾಗತಿಕ ದೊಡ್ಡಣ್ಣಗಳ ನಡುವೆ ದೇಶದ ರಾಜತಾಂತ್ರಿಕ ಬಾಂಧವ್ಯವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳುವುದು ಹೊಸ ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಹೋರಾಟದ ಶಕ್ತಿಯನ್ನು ಪರಿಣಾಮಕಾರಿ ಆಡಳಿತವಾಗಿ ಪರಿವರ್ತಿಸಲು ಈ ವಿದ್ಯಾರ್ಥಿ ಬೆಂಬಲಿತ ಒಕ್ಕೂಟಕ್ಕೆ ಇದು ನಿಜವಾದ ಪರೀಕ್ಷೆಯಾಗಿದೆ.



















