ಕುಂದಾಪುರ: ವಿಶೇಷ ಚೇತನ ಮಗಳನ್ನು ಕತ್ತಿಯಿಂದ ಕುತ್ತಿಗೆಯನ್ನು ಕಡಿದು ಕೊಂದು ಬಳಿಕ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಶಾನಾಡಿ ಕೊರಗ ಕಾಲೋನಿಯಲ್ಲಿ ಭಾನುವಾರ ಸಂಭವಿಸಿದೆ.
ಸುಧಾಕರ ಕೊರಗ ಅವರ ಪುತ್ರಿ ಸುಪ್ರತಿ (14)ಕೊಲೆಯಾದ ಬಾಲಕಿ. ಆಕೆಯ ತಾಯಿ ನೇತ್ರಾವತಿ(34) ಆತ್ಮಹತ್ಯೆ ಮಾಡಿಕೊಂಡವರು.ಸುಧಾಕರ ಅವರು ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದರು. ಸುಪ್ರತಿ ಹುಟ್ಟಿನಿಂದಲೇ ವಿಶೇಷ ಚೇತನೆಯಾಗಿದ್ದಳು.ನಡೆಯಲು ಕುಳಿತುಕೊಳ್ಳಲು ಮಾತನಾಡಲು ಸಾಧ್ಯವಾಗದೆ ಹಾಸಿಗೆಯಲ್ಲಿಯೇ ಇರುತ್ತಿದ್ದಳು. ಮನೆಯ ಕೆಲಸಗಳ ಜತೆಗೆ ಮಗಳ ಆರೈಕೆಯ ಜವಾಬ್ದಾರಿಯನ್ನೂ ನೇತ್ರಾವತಿ ನಿರ್ವಹಿಸುತ್ತಿದ್ದರು.
ಭಾನುವಾರ ಬೆಳಗ್ಗೆ ಸುಧಾಕರ ಅವರು ಕೂಲಿ ಕೆಲಸಕ್ಕೆ ತೆರಳಿದ ಬಳಿಕ ನೇತ್ರಾವತಿ ಮಗಳ ಕುತ್ತಿಗೆಯನ್ನು ಕತ್ತಿಯಿಂದ ಕಡಿದು ಹತ್ಯೆಗೈದಿದ್ದಾರೆ. ಬಳಿಕ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್., ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ,ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್.ಹಾಗೂ ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



















