ಬೆಂಗಳೂರು: ನೀವು ಈಗಷ್ಟೇ ಕೋರ್ಸ್ ಮುಗಿಸಿ ಕೆಲಸಕ್ಕೆ ಸೇರಿದ್ದೀರಾ? ಉದ್ಯೋಗಕ್ಕೆ ಸೇರಿ ಕೆಲವೇ ತಿಂಗಳಾಗಿದೆಯೇ? ಹಾಗಾದರೆ, ನಿಮಗೊಂದು ಸಿಹಿ ಸುದ್ದಿ ಇದೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ವಿಕಸಿತ ಭಾರತ ರೋಜ್ ಗಾರ್ ಯೋಜನೆ (Pradhan Mantri Viksit Bharat Rozgar Yojana – PM-VBRY) ಅಡಿಯಲ್ಲಿ, ಮೊದಲ ಬಾರಿಗೆ ಸಂಘಟಿತ ವಲಯದ ಉದ್ಯೋಗಕ್ಕೆ ಸೇರುವ ಯುವಕ-ಯುವತಿಯರಿಗೆ 15 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಲ್ಲಿದೆ.
ಯೋಜನೆಯ ಮುಖ್ಯಾಂಶಗಳು
• 15 ಸಾವಿರ ರೂ. ವರೆಗೆ ಆರ್ಥಿಕ ನೆರವು: ಮೊದಲ ಬಾರಿಗೆ ಇಪಿಎಫ್ಒದಲ್ಲಿ ನೋಂದಾಯಿಸಿಕೊಳ್ಳುವ ಹೊಸ ಉದ್ಯೋಗಿಗಳಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಒಟ್ಟು 15 ಸಾವಿರ ರೂಪಾಯಿಗಳ ವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ.
• ಎರಡು ಕಂತುಗಳಲ್ಲಿ ಪಾವತಿ: ಈ ಹಣವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ:
- ಮೊದಲ ಕಂತು: ನಿರಂತರವಾಗಿ 6 ತಿಂಗಳುಗಳ ಕಾಲ ಉದ್ಯೋಗ ಪೂರೈಸಿದ ನಂತರ ಬಿಡುಗಡೆ ಮಾಡಲಾಗುತ್ತದೆ.
- ಎರಡನೇ ಕಂತು: ಇಪಿಎಫ್ಒ ಶಿಫಾರಸು ಮಾಡುವ ಹಣಕಾಸು ಸಾಕ್ಷರತಾ ಕೋರ್ಸ್ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ನೀಡಲಾಗುತ್ತದೆ.
ಯಾರೆಲ್ಲಾ ಅರ್ಹರು?
• ವೇತನ ಮಿತಿ: ಉದ್ಯೋಗಿಯ ಮಾಸಿಕ ಒಟ್ಟು ವೇತನ 1 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
• ಪ್ರಥಮ ಬಾರಿಗೆ ಉದ್ಯೋಗ: ಇಪಿಎಫ್ಒ ಅಥವಾ ವಿನಾಯಿತಿ ಪಡೆದ ಟ್ರಸ್ಟ್ ನಲ್ಲಿ ಈ ಹಿಂದೆ ಭವಿಷ್ಯ ನಿಧಿ ಕೊಡುಗೆದಾರರಾಗಿರದೆ, ಹೊಸದಾಗಿ ಉದ್ಯೋಗಕ್ಕೆ ಸೇರಿರುವವರು ಮಾತ್ರ ಅರ್ಹರು.
• ಇತರ ಅಗತ್ಯತೆಗಳು: ಉದ್ಯೋಗಿಯು ಭಾರತೀಯ ನಿವಾಸಿಯಾಗಿರಬೇಕು ಮತ್ತು ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ಇದನ್ನೂ ಓದಿ:ಸಾರ್ವಜನಿಕರೇ ಗಮನಿಸಿ: ನಿಮ್ಮ ಸಮಸ್ಯೆ ಬಗೆಹರಿಸದ ಅಧಿಕಾರಿಗಳಿಗೆ ಬೀಳಲಿದೆ ಇನ್ನು ದಂಡ!


















