ಬೆಂಗಳೂರು: ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ವಂಚನೆಗಳು ಮತ್ತು ನಕಲಿ ಕರೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ನವೆಂಬರ್ 1ರಿಂದ ಮೊಬೈಲ್ ಬಳಕೆದಾರರಿಗೆ ಬರುವ ಇನ್ ಕಮಿಂಗ್ ಕರೆಗಳ ಜತೆಗೆ ಕರೆ ಮಾಡುವವರ ಅಸಲಿ ಹೆಸರು (Caller Name Presentation – CNAP) ಮೊಬೈಲ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದೆ. ದೂರಸಂಪರ್ಕ ಇಲಾಖೆಯು ಹೊಸ ನಿಯಮವನ್ನು ಕಡ್ಡಾಯಗೊಳಿಸಿದೆ.
ಸದ್ಯಕ್ಕೆ 4G ಮತ್ತು 5G ನೆಟ್ ವರ್ಕ್ ಗಳನ್ನು ಬಳಸುವ ಸ್ಮಾರ್ಟ್ ಫೋನ್ ಗಳಲ್ಲಿ ಈ ಸೌಲಭ್ಯವು ಲಭ್ಯವಿರಲಿದೆ. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಶಿಫಾರಸಿನ ಮೇರೆಗೆ ಹೊಸ ವ್ಯವಸ್ಥೆ ಜಾರಿಗೆ ಬರುತ್ತಿದೆ. ಇದರಿಂದ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳ ಹಿಂದಿರುವ ವ್ಯಕ್ತಿ ಯಾರು ಎಂಬುದನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಸಾರ್ವಜನಿಕರು ಆನ್ ಲೈನ್ ವಂಚನೆಗಳಿಂದ ಪಾರಾಗಲು ಹೆಚ್ಚು ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಹೊಸ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?
ಯಾವುದೇ ವ್ಯಕ್ತಿಯು ಕರೆ ಮಾಡಿದಾಗ, ಗ್ರಾಹಕರು ತಮ್ಮ ಸಿಮ್ ಕಾರ್ಡ್ ಖರೀದಿ ವೇಳೆ ನೋಂದಾಯಿಸಿದ ಹೆಸರು ಸ್ವೀಕರಿಸುವವರ ಫೋನ್ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ಆ ಸಂಖ್ಯೆಯನ್ನು ನಿಮ್ಮ ಕಾಂಟ್ಯಾಕ್ಟ್ಸ್ ನಲ್ಲಿ ಸೇರಿಸಿದ್ದರೆ, ನೀವು ಸೇರಿಸಿರುವ ಹೆಸರೇ ಕಾಣಿಸುತ್ತದೆ. ಇಲ್ಲದಿದ್ದರೆ, ಟೆಲಿಕಾಂ ಆಪರೇಟರ್ ಡೇಟಾಬೇಸ್ ನಲ್ಲಿರುವ ಅಧಿಕೃತ ಹೆಸರು ಕಾಣಿಸುತ್ತದೆ. ವಿದೇಶದಿಂದ ಬರುವ ಕರೆಗಳಿಗೆ ‘ಇಂಟರ್ ನ್ಯಾಷನಲ್ ಕಾಲ್’ ಎಂದು ಕಾಣಿಸುತ್ತದೆ.
ಗೌಪ್ಯತೆ ಮತ್ತು ಉದ್ಯಮಗಳಿಗೆ ವಿನಾಯಿತಿ
ಬಳಕೆದಾರರ ವೈಯಕ್ತಿಕ ಗೌಪ್ಯತೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕರೆ ಮುಗಿದ ತಕ್ಷಣ ಆ ಮಾಹಿತಿಯು ಡಿಲೀಟ್ ಆಗಲಿದೆ. ಅಲ್ಲದೆ, ‘ಕೇಬಲ್ ಲೈನ್ ಐಡೆಂಟಿಫಿಕೇಶನ್ ರಿಸ್ಟ್ರಿಕ್ಷನ್’ ಸೌಲಭ್ಯ ಹೊಂದಿರುವವರು ತಮ್ಮ ಹೆಸರನ್ನು ಮರೆಮಾಚಿಕೊಳ್ಳುವ ಅವಕಾಶವನ್ನು ಮುಂದುವರಿಸಬಹುದು.
ವ್ಯಾಪಾರ ಮಾಡುವ ಸಂಸ್ಥೆಗಳು ಜಿಎಸ್ ಟಿ ಪೋರ್ಟಲ್ ಅಥವಾ ಟ್ರೇಡ್ ಮಾರ್ಕ್ ನಲ್ಲಿ ನೋಂದಾಯಿಸಲಾದ ತಮ್ಮ ಅಧಿಕೃತ ವ್ಯಾಪಾರ ಹೆಸರನ್ನು (Business Name) ಕರೆಗಳ ಮೇಲೆ ಪ್ರದರ್ಶಿಸಲು ಅವಕಾಶ ನೀಡಲಾಗುತ್ತದೆ. ಸರ್ಕಾರದ ಈ ದಿಟ್ಟ ಕ್ರಮವು ಡಿಜಿಟಲ್ ವಂಚನೆಗಳನ್ನು ತಡೆಯುವಲ್ಲಿ ಮತ್ತು ದೂರಸಂಪರ್ಕ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಹಬ್ಬದ ಸಂದರ್ಭದಲ್ಲಿ Buy Now, Pay Later ಖರೀದಿ ಚಿಂತನೆ ಇದೆಯೇ? ಈ 5 ಅಪಾಯಗಳು ಗೊತ್ತಿರಲಿ



















