ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆಗಳ ಹೊಸ ಹೊಸ ಮಾರ್ಗಗಳು ಬೆಳಕಿಗೆ ಬರುತ್ತಿದ್ದು, ಸಾರ್ವಜನಿಕರನ್ನು ಬೆಚ್ಚಿಬೀಳಿಸುತ್ತಿವೆ. ಒಟಿಪಿ ಹಂಚಿಕೊಳ್ಳದೆ ಅಥವಾ ಯಾವುದೇ ಲಿಂಕ್ ಮೇಲೆ ಕ್ಲಿಕ್ ಮಾಡದೆಯೂ ಬ್ಯಾಂಕ್ ಖಾತೆಯ ಹಣವನ್ನು ಕಳೆದುಕೊಳ್ಳುವ ಹೊಸ ರೀತಿಯ ವಾಟ್ಸ್ ಆ್ಯಪ್ ವಂಚನೆಯ ಜಾಲವೊಂದು ಈಗ ವರದಿಯಾಗಿದೆ. ಈ ಕುರಿತು ಸೈಬರ್ ಭದ್ರತಾ ತಜ್ಞರು ಮತ್ತು ಪೊಲೀಸರು ಸಾರ್ವಜನಿಕರಿಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ.
ವಂಚಕರು ಮೊದಲು ಅಪರಿಚಿತ ಅಥವಾ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಬಳಕೆದಾರರ ವಾಟ್ಸ್ ಆ್ಯಪ್ ಗೆ ನಕಲಿ ಸಂದೇಶವನ್ನು ಕಳುಹಿಸುತ್ತಾರೆ. ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಡೆಬಿಟ್ ಆಗಿದೆ ಎಂದು ಆ ಸಂದೇಶದಲ್ಲಿ ತಿಳಿಸಲಾಗಿರುತ್ತದೆ. ಇದರ ಬೆನ್ನಲ್ಲೇ ಎರಡನೇ ಸಂದೇಶ ಬಂದು, “ನೀವು ಈ ವ್ಯವಹಾರವನ್ನು ಮಾಡದಿದ್ದರೆ ‘NO’ ಎಂದು ಉತ್ತರಿಸಿ” ಎಂದು ಸೂಚಿಸುತ್ತದೆ.
ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿದೆ ಎಂದು ಆತಂಕಗೊಳ್ಳುವ ಗ್ರಾಹಕರು, ತಾವು ಯಾವುದೇ ವಹಿವಾಟು ನಡೆಸಿಲ್ಲವೆಂದು ಭಾವಿಸಿ ತಕ್ಷಣವೇ ‘No’ ಎಂದು ರಿಪ್ಲೈ ಮಾಡುತ್ತಾರೆ. ಆದರೆ, ಹೀಗೆ ‘No’ ಎಂದು ಸಂದೇಶ ಕಳುಹಿಸಿದ ತಕ್ಷಣವೇ ಅದರಲ್ಲಿ ಇರುವ ಹಿಡನ್ ಲಿಂಕ್ ಗಳು ಮತ್ತು ಮಾಲ್ ವೇರ್ ಗಳು ಸ್ವಯಂಚಾಲಿತವಾಗಿ ಸಕ್ರಿಯಗೊಂಡು, ಜನರ ಖಾತೆಯಿಂದ ಹಣ ಕಡಿತವಾಗುತ್ತದೆ.
ಇದರಿಂದ ವಂಚಕರಿಗೆ ಬಳಕೆದಾರರ ಮೊಬೈಲ್ ಮೇಲೆ ಸಂಪೂರ್ಣ ನಿಯಂತ್ರಣ ಸಿಗುತ್ತದೆ. ಪರಿಣಾಮವಾಗಿ, ಕೇವಲ ಕೆಲವೇ ಕ್ಷಣಗಳಲ್ಲಿ ಬ್ಯಾಂಕ್ ಖಾತೆಯಲ್ಲಿರುವ ಹಣ ಸಂಪೂರ್ಣವಾಗಿ ಮಾಯವಾಗುತ್ತದೆ. ಹೈದರಾಬಾದ್ ನಲ್ಲಿ ಇಂತಹ ಘಟನೆ ವರದಿಯಾಗಿದ್ದು, ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.
ಹೀಗಾಗಿ ಬ್ಯಾಂಕ್ ವ್ಯವಹಾರಗಳ ಬಗ್ಗೆ ಬರುವ ಇಂತಹ ನಕಲಿ ಸಂದೇಶಗಳಿಗೆ ಯಾವುದೇ ಕಾರಣಕ್ಕೂ ‘Yes’ ಅಥವಾ ‘No’ ಎಂದು ಉತ್ತರಿಸಬೇಡಿ ಎಂದು ಪೊಲೀಸರು ಮತ್ತು ಸೈಬರ್ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಯಾವುದೇ ಸಂದೇಶ ಬಂದರೂ ಗಾಬರಿಗೊಳ್ಳದೆ ಅಧಿಕೃತ ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಆ್ಯಪ್ ಪರಿಶೀಲಿಸಬೇಕು. ಅಂತಹ ವಂಚನೆಗಳ ಸಂದರ್ಭದಲ್ಲಿ ಕೂಡಲೇ ರಾಷ್ಟ್ರೀಯ ಸೈಬರ್ ಸಹಾಯವಾಣಿ ಸಂಖ್ಯೆ 1930 ಅನ್ನು ಸಂಪರ್ಕಿಸಿ ಅಥವಾ cybercrime.gov.in ವೆಬ್ ಸೈಟ್ ನಲ್ಲಿ ದೂರು ದಾಖಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.



















