ಗುರುಗ್ರಾಮ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಯಲಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಗೂ ಮುನ್ನವೇ ಪೊಲೀಸರು ಭರ್ಜರಿ ಬೇಟೆ ಆರಂಭಿಸಿದ್ದು, ಪ್ರಸಿದ್ಧ ಯೂಟ್ಯೂಬರ್ ಧ್ರುವ ರಾಠೀ ಅವರನ್ನು ಗುರುಗ್ರಾಮದ ಅವರ ನಿವಾಸದಲ್ಲೇ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಇಸಿ ವಿರುದ್ಧದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅವರು ಸಿದ್ಧತೆ ನಡೆಸಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಜರ್ಮನಿಯಿಂದ ಈ ವಾರವಷ್ಟೇ ಭಾರತಕ್ಕೆ ಆಗಮಿಸಿದ್ದ ಧ್ರುವ ರಾಠೀ ಅವರು ಅಕ್ಟೋಬರ್ 8 ರಂದು ಬೆಂಗಳೂರಿನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯಲ್ಲೂ ಭಾಗವಹಿಸಿದ್ದರು. ಶನಿವಾರ ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ತಾನು ಭಾಗವಹಿಸುವುದಾಗಿ ಶುಕ್ರವಾರ ಸಂಜೆಯಷ್ಟೇ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ವಿಡಿಯೋ ಮೂಲಕ ಘೋಷಿಸಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ದೆಹಲಿ ಪೊಲೀಸರ ಸುಮಾರು 50 ಸಿಬ್ಬಂದಿಯ ತಂಡವು ಶನಿವಾರ ಬೆಳಿಗ್ಗೆ ಗುರುಗ್ರಾಮದ ಸೆಕ್ಟರ್ 56ರಲ್ಲಿರುವ ರಾಠೀ ಅವರ ಮನೆಗೆ ನುಗ್ಗಿ ವಶಕ್ಕೆ ತೆಗೆದುಕೊಂಡಿದೆ. ರಾಠೀ ಅವರ ಈ ದಿಢೀರ್ ಬಂಧನವನ್ನು ಸಿಜೆಪಿ ತೀವ್ರವಾಗಿ ಖಂಡಿಸಿದ್ದು, ಕೂಡಲೇ ಅವರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದೆ.
ಸಿಜೆಪಿ ನಾಯಕರಿಗೆ ದಿಗ್ಬಂಧನ
ಧ್ರುವ ರಾಠೀ ಮಾತ್ರವಲ್ಲದೆ, ಸಿಜೆಪಿ ಕಾನೂನು ಕೋಶದ ಮುಖ್ಯಸ್ಥೆ ರತ್ನ ಸಿಂಗ್ ಕೂಡ ತಾವೂ ಗೃಹಬಂಧನಕ್ಕೆ ಒಳಗಾಗಿರುವುದಾಗಿ ವಿಡಿಯೋ ಮೂಲಕ ತಿಳಿಸಿದ್ದಾರೆ. ಬೆಳಿಗ್ಗೆಯೇ ಮನೆಗೆ ಬಂದ ಪೊಲೀಸರು ಹೊರಹೋಗದಂತೆ ನಿರ್ಬಂಧಿಸಿದ್ದು, ತಾವು ಕಾರಿನಲ್ಲಿ ಕುಳಿತಾಗಲೂ ಪೊಲೀಸರು ಸುತ್ತುವರೆದು ಮುಂದೆ ಹೋಗಲು ಬಿಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಯಾವುದೇ ಕಾರಣವನ್ನು ನೀಡದೆ ಪ್ರತಿಭಟನಾಕಾರರನ್ನು ತಡೆಯಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಬಿಗುವಿನ ವಾತಾವರಣ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಈ ಪ್ರತಿಭಟನೆಗೆ ಸೂಕ್ತ ಮುನ್ಸೂಚನೆ ಹಾಗೂ ಪೂರ್ವಾನುಮತಿ ಇಲ್ಲದಿರುವ ಕಾರಣಕ್ಕೆ ದೆಹಲಿ ಪೊಲೀಸರು ಈಗಾಗಲೇ ಪ್ರತಿಭಟನೆಗೆ ನಕಾರ ಸೂಚಿಸಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವ್ಯಾಪಕ ಬಂದೋಬಸ್ತ್ ಏರ್ಪಡಿಸಿದ್ದಾರೆ. ದೆಹಲಿಯಾದ್ಯಂತ ರಾತ್ರೋರಾತ್ರಿ 400ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆಯಲಾಗಿದ್ದು, ನೂರಾರು ರೈಲುಗಳು ಹಾಗೂ ಡಜನ್‌ಗಟ್ಟಲೆ ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ. ಜಂತರ್ ಮಂತರ್‌ನಲ್ಲಿ ನಡೆಯಲಿರುವ ಈ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರವು 20,000ಕ್ಕೂ ಹೆಚ್ಚು ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಿರುವುದು ರಾಜಧಾನಿಯಲ್ಲಿ ಉದ್ವಿಗ್ನ ಪರಿಸರ ನಿರ್ಮಾಣ ಮಾಡಿದೆ.
ಇದನ್ನೂ ಓದಿ :ದಿಲ್ಲಿ ಪ್ರತಿಭಟನೆಗೆ ಮುನ್ನವೇ ವಿಮಾನದೊಳಗೆಯೇ CJP ಸ್ಥಾಪಕ ಅಭಿಜಿತ್ ದೀಪ್ಕೆ ಸೇರಿ ನಾಯಕರ ದಿಢೀರ್ ಬಂಧನ!


















