ಬೆಂಗಳೂರು: ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಮೂಲಕ 2,000 ರೂ.ಗಿಂತ ಹೆಚ್ಚಿನ ಪರ್ಸನ್-ಟು-ಮರ್ಚೆಂಟ್ (ವ್ಯಕ್ತಿಯಿಂದ ವ್ಯಾಪಾರಿಗೆ) ಮಾಡುವ ಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ ಘೋಷಿಸಲಾಗಿದೆ. ಇದೇ ರೀತಿ ಯುಪಿಐ ಮೂಲಕ ಮ್ಯೂಚುವಲ್ ಫಂಡ್, ಇನ್ಶೂರೆನ್ಸ್ ಮತ್ತು ಒಟಿಟಿ ಚಂದಾದಾರಿಕೆ ಪಾವತಿಸುವ ಗ್ರಾಹಕರಿಗೆ ಅಕ್ಟೋಬರ್ 15 ರಿಂದ ಹೊಸ ನಿಯಮಗಳು ಅನ್ವಯವಾಗಲಿವೆ.
ಪ್ರಮುಖ ಬದಲಾವಣೆಗಳು ಮತ್ತು ವಿನಾಯಿತಿಗಳು
ಯುಪಿಐ ಆಟೋ ಪೇಗೆ ವಿನಾಯಿತಿ: ಮ್ಯೂಚುವಲ್ ಫಂಡ್ ಎಸ್ಐಪಿ, ಒಟಿಟಿ ಚಂದಾದಾರಿಕೆಗಳು ಮತ್ತು ವಿದ್ಯುತ್ ಬಿಲ್ ಗಳಂತಹ ಆಟೋ ಪೇ ಮೂಲಕ ಮಾಸಿಕ ಕಡಿತಗೊಳ್ಳುವ ಪಾವತಿಗಳಿಗೆ ಯಾವುದೇ ಎಂಡಿಆರ್ ಶುಲ್ಕ ಅನ್ವಯಿಸುವುದಿಲ್ಲ.
ಒಮ್ಮೆಯ ಪಾವತಿಗೆ ಶುಲ್ಕ: 2 ಸಾವಿರ ರೂಪಾಯಿಗಿಂತ ಹೆಚ್ಚಿನ ಒಮ್ಮೆಯ (One-time) ವಹಿವಾಟುಗಳಿಗೆ ಶೇ. 0.4 ರಷ್ಟು ಎಂಡಿಆರ್ ದರ ನಿಗದಿಯಾಗಲಿದೆ.
ಮ್ಯೂಚುವಲ್ ಫಂಡ್ ಒಮ್ಮೆಯ ಹೂಡಿಕೆ: ಎಸ್ಐಪಿ ಹೊರತುಪಡಿಸಿ, ಮ್ಯೂಚುವಲ್ ಫಂಡ್ಗಳಲ್ಲಿ ಮಾಡುವ ಒಮ್ಮೆಯ ಪಾವತಿಗೆ ಶೇ. 0.02 ರಷ್ಟು ಎಂಡಿಆರ್ ಅನ್ವಯಿಸಲಿದ್ದು, ಗರಿಷ್ಠ 300 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.
ವಿಮಾ ಪ್ರೀಮಿಯಂ ಪಾವತಿ: 2 ಸಾವಿರ ರೂಪಾಯಿಗಿಂತ ಹೆಚ್ಚಿನ ಇನ್ಶೂರೆನ್ಸ್ ಪ್ರೀಮಿಯಂ ಪಾವತಿಗೆ ಶೇ. 0.4 ರ ಬದಲು ಪ್ರತಿ ವಹಿವಾಟಿಗೆ 5 ರೂಪಾಯಿ ನಿಗದಿತ ಎಂಡಿಆರ್ ಇರಲಿದೆ.
ಈ ಬದಲಾವಣೆಗಳು ಗ್ರಾಹಕರು ನೇರವಾಗಿ ಪಾವತಿಸುವ ಶುಲ್ಕವಾಗಿರದೆ, ವರ್ತಕರು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಆಂತರಿಕ ನಿರ್ವಹಣೆಯ ಭಾಗವಾಗಿರಲಿವೆ. ಎಸ್ಐಪಿ ಮತ್ತು ಆಟೋ-ಡೆಬಿಟ್ ಸೌಲಭ್ಯ ಬಳಸುವ ಸಾಮಾನ್ಯ ಗ್ರಾಹಕರಿಗೆ ಇದರಿಂದ ಯಾವುದೇ ಹೆಚ್ಚುವರಿ ಹೊರೆ ಬೀಳುವುದಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ :ಫ್ಲೈದುಬೈ ವಿಮಾನವನ್ನು ಆಗಸದಲ್ಲೇ ಹೊಡೆದುರುಳಿಸಲು ಇಸ್ರೇಲ್ ಮುಂದಾಗಿತ್ತೇ?: ಮಾರ್ಗ ಬದಲಾವಣೆಯಿಂದ ತಪ್ಪಿತು ಅನಾಹುತ!



















