ಬೆಂಗಳೂರು : ಸುಜುಕಿ ಭವಿಷ್ಯದ ಕಾರುಗಳ ತೂಕವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಮಹತ್ವದ ತಂತ್ರಜ್ಞಾನ ಯೋಜನೆಯನ್ನು ಮುಂದಿಟ್ಟಿದೆ. 2030ರ ವೇಳೆಗೆ ಕಾರಿನ ಒಟ್ಟು ತೂಕದಲ್ಲಿ ಸುಮಾರು 100 ಕೆ.ಜಿ. ಕಡಿತಗೊಳಿಸುವ ಸ್ಪಷ್ಟ ಮಾರ್ಗವನ್ನು ಕಂಡುಕೊಂಡಿದ್ದೇವೆ ಎಂದು ಸುಜುಕಿ ಮೋಟಾರ್ ಕಾರ್ಪೊರೇಷನ್ ತಿಳಿಸಿದೆ. ಭವಿಷ್ಯದ ತಂತ್ರಜ್ಞಾನಗಳನ್ನು ಸೇರಿಸಿದರೆ ಈ ಕಡಿತವನ್ನು 120 ಕೆ.ಜಿ.ವರೆಗೆ ಹೆಚ್ಚಿಸುವ ಸಾಧ್ಯತೆಯನ್ನೂ ಕಂಪನಿ ಪರಿಶೀಲಿಸುತ್ತಿದೆ.
ಕಾರಿನ ತೂಕ ಕಡಿಮೆ ಮಾಡಲು ಸುರಕ್ಷತಾ ರಚನೆಯಲ್ಲಿ ಬಳಸುವ ವಸ್ತುಗಳನ್ನು ಮಾತ್ರ ಬದಲಿಸುವುದು ಸುಜುಕಿಯ ಉದ್ದೇಶವಲ್ಲ. ಅಪಘಾತ ಸಂಭವಿಸಿದಾಗ ಹೊಡೆತದ ಶಕ್ತಿಯನ್ನು ಕಾರಿನ ರಚನೆ ಹೇಗೆ ಹೀರಿಕೊಳ್ಳಬೇಕು ಮತ್ತು ಪ್ರಯಾಣಿಕರಿಗೆ ರಕ್ಷಣೆ ನೀಡಬೇಕು ಎಂಬುದನ್ನೇ ಮೂಲ ವಿನ್ಯಾಸ ಹಂತದಿಂದ ಮರುಪರಿಶೀಲಿಸಲಾಗುತ್ತಿದೆ. ಎಂಜಿನ್ ಮತ್ತು ಪ್ರಯಾಣಿಕರಿಗೆ ಬೇಕಾದಷ್ಟು ಜಾಗವನ್ನು ಸಮರ್ಪಕವಾಗಿ ಬಳಸಿಕೊಂಡು ಅಪಘಾತದ ಶಕ್ತಿಯನ್ನು ನಿಯಂತ್ರಿಸುವ ವಿಧಾನವನ್ನು ಕಂಪನಿ ಅಭಿವೃದ್ಧಿಪಡಿಸುತ್ತಿದೆ.
ಇದರ ಭಾಗವಾಗಿ ಎಂಜಿನ್ನಂತಹ ಭಾರವಾದ ಭಾಗಗಳ ಸ್ಥಾನವನ್ನು ಬದಲಿಸುವುದು, ಕಾರಿನ ರಚನೆ ಮತ್ತು ವಿನ್ಯಾಸವನ್ನು ಮರುಹೊಂದಿಸುವುದು, ವಿವಿಧ ವಸ್ತುಗಳು ಹಾಗೂ ಬಿಡಿಭಾಗಗಳನ್ನು ಮರುಪರಿಶೀಲಿಸುವುದು ನಡೆಯುತ್ತಿದೆ. ಬಾಡಿ, ಎಂಜಿನ್, ವಿದ್ಯುತ್ ವ್ಯವಸ್ಥೆ ಮತ್ತು ಉತ್ಪಾದನಾ ವಿಭಾಗಗಳ ಪರಿಣತಿಯನ್ನು ಒಟ್ಟುಗೂಡಿಸಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಹಗುರ ಕಾರು ಎಂದರೆ ಕಡಿಮೆ ಇಂಧನ ಬಳಕೆ
ಕಾರಿನ ತೂಕ ಕಡಿಮೆಯಾದರೆ ಅದನ್ನು ಚಲಿಸಲು ಬೇಕಾಗುವ ಶಕ್ತಿಯೂ ಕಡಿಮೆಯಾಗುತ್ತದೆ. ಹೀಗಾಗಿ ಭವಿಷ್ಯದ ಪೆಟ್ರೋಲ್, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳಿಗೆ ಈ ತಂತ್ರಜ್ಞಾನ ಪ್ರಯೋಜನಕಾರಿಯಾಗಬಹುದು. ವಿಶೇಷವಾಗಿ ಎಲೆಕ್ಟ್ರಿಕ್ ಕಾರುಗಳಲ್ಲಿ ವಾಹನದ ತೂಕ ಕಡಿಮೆಯಾದರೆ, ಅದೇ ಬ್ಯಾಟರಿ ಸಾಮರ್ಥ್ಯದಲ್ಲಿ ಹೆಚ್ಚು ಪರಿಣಾಮಕಾರಿ ಚಾಲನೆ ಸಾಧ್ಯವಾಗಬಹುದು. ಮತ್ತೊಂದೆಡೆ, ದೊಡ್ಡ ಬ್ಯಾಟರಿ ಅಳವಡಿಸುವ ಅಗತ್ಯವೂ ಕಡಿಮೆಯಾಗುವ ಸಾಧ್ಯತೆಯಿದೆ.
ಈಗಲೇ ಯಾವ ಕಾರಿನಲ್ಲಿ ಬರಲಿದೆ?
ಆದರೆ ಇಲ್ಲಿ ಒಂದು ಪ್ರಮುಖ ಅಂಶವಿದೆ. ಸುಜುಕಿ ಯಾವ ಉತ್ಪಾದನಾ ಕಾರಿನಲ್ಲಿ ಮೊದಲು ಈ 100 ಕೆ.ಜಿ. ತೂಕ ಕಡಿತ ಜಾರಿಗೆ ಬರಲಿದೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ. ಹಾಗೆಯೇ ಇಂದಿನ ಯಾವ ನಿರ್ದಿಷ್ಟ ಮಾದರಿಯ ತೂಕದೊಂದಿಗೆ ಈ 100 ಕೆ.ಜಿ. ಕಡಿತವನ್ನು ಹೋಲಿಸಲಾಗುತ್ತದೆ ಎಂಬುದನ್ನೂ ಕಂಪನಿ ತಿಳಿಸಿಲ್ಲ. ಹೀಗಾಗಿ ಮುಂದಿನ ಸ್ವಿಫ್ಟ್, ಬಲೆನೊ, ಬ್ರೆಝಾ ಅಥವಾ ಯಾವುದೇ ನಿರ್ದಿಷ್ಟ ಎಸ್ಯುವಿ 100 ಕೆ.ಜಿ. ಹಗುರವಾಗಲಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ.
ಸುಜುಕಿಯ ಈ ಯೋಜನೆಗೆ ಈಗಿರುವ ‘ಹಗುರ ಮತ್ತು ಸುರಕ್ಷಿತ ಕಾರು’ ತಂತ್ರಜ್ಞಾನವೇ ಆಧಾರವಾಗಿದೆ. 2025ರಲ್ಲೇ ಕಂಪನಿ ಸುಮಾರು 80 ಕೆ.ಜಿ. ತೂಕ ಕಡಿತದ ಮಾರ್ಗವನ್ನು ಗುರುತಿಸಿತ್ತು. ಇದೀಗ 2030ರೊಳಗೆ 100 ಕೆ.ಜಿ. ಕಡಿತದ ಗುರಿಗೆ ಸ್ಪಷ್ಟ ಮಾರ್ಗವಿದೆ ಎಂದು ಹೇಳಿರುವುದು ಮುಂದಿನ ತಲೆಮಾರಿನ ಸುಜುಕಿ ಕಾರುಗಳಲ್ಲಿ ತೂಕ, ಇಂಧನ ದಕ್ಷತೆ ಮತ್ತು ವಿದ್ಯುದೀಕರಣದ ನಡುವೆ ಹೊಸ ಸಮತೋಲನ ತರಲು ಕಂಪನಿ ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ.
ಇದನ್ನೂ ಓದಿ ; ಬೆಂಗಳೂರಿನಲ್ಲಿರುವ BEL ಸಂಸ್ಥೆಯಲ್ಲಿ ಎಂಜಿನಿಯರ್ಗಳ ನೇಮಕಾತಿ : 1.2 ಲಕ್ಷ ರೂ. ಸಂಬಳ



















