ಅಮ್ರೋಹಾ : ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಕ್ಕೆ ಕರೆದೊಯ್ಯುವುದಾಗಿ ನಂಬಿಸಿ ಹರಿಯಾಣದ 23 ವರ್ಷದ ಯುವತಿಯನ್ನು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಫಾರ್ಮ್‌ಹೌಸ್‌ಗೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರ ಇಬ್ಬರು ಸಿಬ್ಬಂದಿ ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿ ನೀಡಿದ ದೂರಿನ ಆಧಾರದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಅಮ್ರೋಹಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಖನ್ ಸಿಂಗ್ ಯಾದವ್ ತಿಳಿಸಿದ್ದಾರೆ.
ಧಾರ್ಮಿಕ ಕ್ಷೇತ್ರಗಳಿಗೆ ಕರೆದೊಯ್ಯುವುದಾಗಿ ನಂಬಿಸಿ ಕೃತ್ಯ
ಪೊಲೀಸರ ಪ್ರಕಾರ, ಸೆಪ್ಟೆಂಬರ್ 20ರಂದು ಮಹಿಳೆಯೊಬ್ಬರು ಯುವತಿಯನ್ನು ಸಂಪರ್ಕಿಸಿ ಅಮ್ರೋಹಾದ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಕುರಿತು ಮಾತನಾಡಿದ್ದರು. ಈ ಪ್ರವಾಸಕ್ಕಾಗಿ ಸಿಆರ್‌ಪಿಎಫ್ ಇನ್‌ಸ್ಪೆಕ್ಟರ್ ಮೊಹಿತ್ ಅವರನ್ನು ಸಂಪರ್ಕಿಸುವಂತೆ ಆಕೆ ಯುವತಿಗೆ ತಿಳಿಸಿದ್ದಳು.
ಸೆಪ್ಟೆಂಬರ್ 21ರಂದು ಸೋನಿಪತ್‌ನಲ್ಲಿ ಮೊಹಿತ್ ಅವರನ್ನು ಭೇಟಿಯಾದ ಯುವತಿ, ಬಳಿಕ ಅವರೊಂದಿಗೆ ಮೀರತ್‌ಗೆ ತೆರಳಿದ್ದಳು.
ಅಲ್ಲಿ ಸಿಆರ್‌ಪಿಎಫ್‌ನ ಹೆಡ್ ಕಾನ್‌ಸ್ಟೆಬಲ್ ಲಾಲಾರಾಮ್ ಯಾದವ್ ಕೂಡ ಅವರೊಂದಿಗೆ ಸೇರಿಕೊಂಡಿದ್ದರು. ಮರುದಿನ ಸಂಜೆ ಮೊಹಿತ್ ಮತ್ತು ಲಾಲಾರಾಮ್ ಕಾರಿನಲ್ಲಿ ಯುವತಿಯನ್ನು ಅಮ್ರೋಹಾ ಜಿಲ್ಲೆಯ ಹಸನ್‌ಪುರಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಾರ್ಗಮಧ್ಯೆ ಉತ್ತರ ಪ್ರದೇಶ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಸಂಜಯ್ ತೋಮರ್ ಕೂಡ ಕಾರಿಗೆ ಹತ್ತಿಕೊಂಡಿದ್ದಾರೆ. ಬಳಿಕ ಮೂವರು ಯುವತಿಯನ್ನು ಅತ್ರಾಸಿ–ಹಸನ್‌ಪುರ ರಸ್ತೆಯಲ್ಲಿರುವ ಫಾರ್ಮ್‌ಹೌಸ್‌ಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಅತ್ಯಾಚಾರ ಎಸಗಿದ ಆರೋಪ
ಯುವತಿ ನೀಡಿರುವ ದೂರಿನ ಪ್ರಕಾರ, ಫಾರ್ಮ್‌ಹೌಸ್‌ಗೆ ತಲುಪಿದ ಬಳಿಕ ಮೊಹಿತ್, ಲಾಲಾರಾಮ್ ಯಾದವ್ ಮತ್ತು ಸಂಜಯ್ ತೋಮರ್ ಸರದಿಯಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಪ್ರಮೋದ್ ಎಂಬಾತ ಕೊಠಡಿಗೆ ಬಂದು ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಆತನನ್ನು ತಳ್ಳಿ ಹೊರಗೆ ಕಳುಹಿಸಿದ ಯುವತಿ, ಬಳಿಕ ಕೊಠಡಿಯ ಬಾಗಿಲನ್ನು ಒಳಗಿನಿಂದ ಹಾಕಿಕೊಂಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ನಂತರ ಆನ್‌ಲೈನ್‌ನಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆಯನ್ನು ಹುಡುಕಿ, ಬುಧವಾರ ಬೆಳಗಿನ ಜಾವ ಸುಮಾರು 6 ಗಂಟೆಗೆ ಪೊಲೀಸರಿಗೆ ಕರೆ ಮಾಡಿ ಸಹಾಯ ಕೋರಿದ್ದಾರೆ. ಮಾಹಿತಿ ದೊರೆತ ಕೂಡಲೇ ಹಸನ್‌ಪುರ ಮತ್ತು ರಾಜಬ್‌ಪುರ ಠಾಣೆಗಳ ಪೊಲೀಸರು ಫಾರ್ಮ್‌ಹೌಸ್‌ಗೆ ತೆರಳಿ ಯುವತಿಯನ್ನು ರಕ್ಷಿಸಿದ್ದಾರೆ. ಬಳಿಕ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.
ಪೊಲೀಸ್ ಅಧಿಕಾರಿಗೆ ಅಮಾನತು
ಪ್ರಕರಣದಲ್ಲಿ ಆರೋಪಿಯಾಗಿರುವ ಸಬ್‌ಇನ್‌ಸ್ಪೆಕ್ಟರ್ ಸಂಜಯ್ ತೋಮರ್ ಅವರನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ಇಲಾಖಾ ಕ್ರಮ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ.
ಘಟನೆ ನಡೆದಿದೆ ಎನ್ನಲಾಗಿರುವ ಫಾರ್ಮ್‌ಹೌಸ್ ಉತ್ತರಾಖಂಡದ ಸ್ವತಂತ್ರ ಶಾಸಕರೊಬ್ಬರಿಗೆ ಸೇರಿದ್ದು ಎಂದು ಹಸನ್‌ಪುರ ಠಾಣೆಯ ಪ್ರಭಾರಿ ಅಮರ್ ಪಾಲ್ ಸಿಂಗ್ ತಿಳಿಸಿದ್ದಾರೆ. ಫಾರ್ಮ್‌ಹೌಸ್‌ನ ವ್ಯವಸ್ಥಾಪಕರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಯುವತಿಯ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ವೈದ್ಯಕೀಯ ಪರೀಕ್ಷೆ ಸೇರಿದಂತೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಇತರ ಅಂಶಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಮುಳಬಾಗಿಲಿನಲ್ಲಿ ಹೆಚ್ಚಾದ ಕಳ್ಳರ ಹಾವಳಿ.. ಸಿಸಿಟಿವಿ ದೃಶ್ಯಗಳು ವೈರಲ್!



















