ಮುಂಬೈ : ಪರೀಕ್ಷೆಯಲ್ಲಿ ಚಾಟ್ ಜಿಪಿಟಿ ಕೃತಕ ಬುದ್ಧಿಮತ್ತೆ ಬಳಸಿ ವಂಚಿಸಲು ಯತ್ನಿಸುವಾಗ ಸಿಕ್ಕಿಬಿದ್ದು, ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಬೇರೆ ತಿರುವು ಪಡೆದುಕೊಂಡಿದೆ. ಎರಡನೇ ವರ್ಷದ ಎಂ.ಎಸ್ಸಿ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೊಫೆಸರ್ ಸೂರ್ಯನಾರಾಯಣ್ ದುಲ್ಲಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಥಮ ಮಾಹಿತಿ ವರದಿಯಲ್ಲಿ (ಎಫ್ಐಆರ್) ಇತರೆ ಇಬ್ಬರು ಅಜ್ಞಾತ ವ್ಯಕ್ತಿಗಳನ್ನೂ ಹೆಸರಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರ ಕ್ರೈಂ ಬ್ರಾಂಚ್ಗೆ ಹಸ್ತಾಂತರಿಸಲಾಗಿದೆ.
ವಿದ್ಯಾರ್ಥಿಯ ತಂದೆ ರವೀಂದ್ರ ಚಕ್ರಧರ್ ವಾಂಖಡೆ ಅವರು ನೀಡಿರುವ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಜಂಟಿ ಹೊಣೆಗಾರಿಕೆಯಡಿ ಕೇಸ್ ದಾಖಲಿಸಲಾಗಿದೆ. ಜೊತೆಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿಯೂ ಪ್ರಕರಣಗಳನ್ನು ದಾಖಲಿಸಲು ನಿರ್ಧರಿಸಲಾಗಿದೆ.
3 ತಿಂಗಳಿಂದ ಜಾತಿ ನಿಂದನೆ, ಕಿರುಕುಳ ಆರೋಪ
ಸಾಹಿಲ್ ಅವರ ತಂದೆ ಸಲ್ಲಿಸಿರುವ ದೂರಿನ ಪ್ರಕಾರ, ಕಳೆದ ಮೂರು ತಿಂಗಳುಗಳಿಂದ ಅವರ ಮಗ ತೀವ್ರ ಮಾನಸಿಕ ಕಿರುಕುಳ ಹಾಗೂ ಜಾತಿ ಆಧಾರಿತ ನಿಂದನೆಗೆ ಒಳಗಾಗಿದ್ದ. ಸಂಸ್ಥೆಯ ನಿರ್ದೇಶಕ ಶಿರೀಶ್ ಬಿ ಕೆದಾರೆ ಅವರ ಸೂಚನೆಯ ಮೇರೆಗೆ ಪರೀಕ್ಷೆಯ ಮೇಲ್ವಿಚಾರಕರಾಗಿದ್ದ ಪ್ರೊಫೆಸರ್ ಸೂರ್ಯನಾರಾಯಣ್ ದುಲ್ಲಾ ಅವರು ಸಾಹಿಲ್ ಮೇಲೆ ಜಾತಿ ನಿಂದನೆ ಮಾಡಿದ್ದರೆಂದು ಆರೋಪಿಸಲಾಗಿದೆ. ಸಾಹಿಲ್ ಕೆಳಜಾತಿಗೆ ಸೇರಿದವನೆಂಬ ಕಾರಣಕ್ಕೆ ಆತನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಪ್ರೊಫೆಸರ್ ಬೆದರಿಕೆ ಹಾಕಿದ್ದರೆಂದು ತಂದೆ ದೂರಿದ್ದು, ಈ ಮಾನಸಿಕ ಹಿಂಸೆಯೇ ಮಗನ ಸಾವಿಗೆ ಕಾರಣ ಎಂದು ಹೇಳಿದ್ದಾರೆ.
ಪರೀಕ್ಷೆಯಲ್ಲಿ ಚಾಟ್ಜಿಪಿಟಿ ಬಳಕೆ
ಶುಕ್ರವಾರ ಪರೀಕ್ಷೆಯ ಸಮಯದಲ್ಲಿ ಸಾಹಿಲ್ ತಮ್ಮ ಮೊಬೈಲ್ ಫೋನ್ ಬಳಸಿ, ಚಾಟ್ಜಿಪಿಟಿ ಮೂಲಕ ಪ್ರಶ್ನೆಪತ್ರಿಕೆಗೆ ಉತ್ತರ ಹುಡುಕಲು ಯತ್ನಿಸಿದಾಗ ಸಿಕ್ಕಿಬಿದ್ದಿದ್ದರು. ಇದರ ಬೆನ್ನಲ್ಲೇ ಅದೇ ಸಂಜೆ ಅವರು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆದರೆ ಐಐಟಿ ಬಾಂಬೆ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ವಿದ್ಯಾರ್ಥಿಯ ವಿರುದ್ಧ ಯಾವುದೇ ಶಿಸ್ತುಕ್ರಮ ಕೈಗೊಂಡಿರಲಿಲ್ಲ ಎಂದು ಹೇಳಿದೆ. ಘಟನೆಯ ನಂತರ ವಿಭಾಗೀಯ ಮುಖ್ಯಸ್ಥರು ಹಾಗೂ ಶಿಕ್ಷಕರು ವಿದ್ಯಾರ್ಥಿಗೆ ಕೌನ್ಸಿಲಿಂಗ್ ನಡೆಸಿ, ಈ ಘಟನೆಯಿಂದ ಆತನ ಶೈಕ್ಷಣಿಕ ವೃತ್ತಿಜೀವನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದ್ದರು ಎಂದು ಸಂಸ್ಥೆ ಪ್ರತಿಪಾದಿಸಿದೆ.
ಕ್ಯಾಂಪಸ್ನಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳು
ಐಐಟಿ ಬಾಂಬೆ ಪೋವಾಯಿ ಕ್ಯಾಂಪಸ್ನಲ್ಲಿ ಕಳೆದ ಏಳು ತಿಂಗಳುಗಳಲ್ಲಿ ಸಂಭವಿಸಿದ ಮೂರನೇ ಆತ್ಮಹತ್ಯೆ ಘಟನೆ ಇದಾಗಿದೆ. ಇದಕ್ಕೂ ಮೊದಲು ಫೆಬ್ರವರಿಯಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯೊಬ್ಬ ಹಾಗೂ ಜುಲೈನಲ್ಲಿ ಬಿ.ಟೆಕ್ ದ್ವಿತೀಯ ವರ್ಷದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದರು. ಸರಣಿ ಆತ್ಮಹತ್ಯೆ ಘಟನೆಗಳು ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಮಾನಸಿಕ ಆರೋಗ್ಯದ ಕುರಿತು ತೀವ್ರ ಕಳವಳವನ್ನು ಹುಟ್ಟುಹಾಕಿವೆ. ಜೊತೆಗೆ, ಸಾಹಿಲ್ ಆತ್ಮಹತ್ಯೆಯ ಬೆನ್ನಲ್ಲೇ ರೊಚ್ಚಿಗೆದ್ದ ವಿದ್ಯಾರ್ಥಿಗಳು ಕ್ಯಾಂಪಸ್ನಲ್ಲಿ ಭಾರೀ ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಇದನ್ನೂ ಓದಿ : ಟಿ20 ಕ್ರಿಕೆಟ್ನಲ್ಲಿ ಸ್ಮೃತಿ ಮಂದಾನ ಹೊಸ ಇತಿಹಾಸ; ಮಹಿಳಾ ಟಿ20ಐನಲ್ಲಿ ಗರಿಷ್ಠ ರನ್ಗಳ ಸರದಾರ್ತಿ



















