ವಿಜಯನಗರ ; ಜಿಲ್ಲೆಯ ಕೊಟ್ಟೂರು ತಾಲೂಕಿನ ದೂಪದಹಳ್ಳಿ ಭುಜಂಗನಗರದಲ್ಲಿ ಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಗ್ರಾಮಸ್ಥರು ನಿತ್ಯವೂ ಕೊಚ್ಚೆಯಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳ ಮುಂದೆ ಚರಂಡಿ ನೀರು ನಿಂತಲ್ಲೇ ನಿಂತಿದ್ದು, ದುರ್ವಾಸನೆ ಹಾಗೂ ಕೊಳಕು ವಾತಾವರಣದಿಂದ ಗ್ರಾಮಸ್ಥರು ಬೇಸತ್ತಿದ್ದಾರೆ.
ಚರಂಡಿ ನೀರು ನಿಂತಿರುವುದರಿಂದ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಮೈತುಂಬ ಅಲರ್ಜಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳು ಕೂಡ ಸಮಸ್ಯೆ ಎದುರಿಸುತ್ತಿದ್ದು, ಅಲರ್ಜಿ ಕಾಣಿಸಿಕೊಂಡಿದೆ ಎಂದು ಹೇಳಿ ಶಾಲೆಯಿಂದಲೇ ವಾಪಸ್ ಕಳುಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಇನ್ನು, ಮನೆಗಳ ಸುತ್ತಮುತ್ತ ಕೊಳಚೆ ನೀರು ನಿಂತಿರುವುದರಿಂದ ಜೀವ ಭಯದಲ್ಲೇ ವಾಸಿಸುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಲವು ದಿನಗಳಿಂದ ಸಮಸ್ಯೆ ಮುಂದುವರಿದಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚರಂಡಿ ವ್ಯವಸ್ಥೆ ಸರಿಪಡಿಸಿ, ರಸ್ತೆಯಲ್ಲಿ ಹರಿಯುತ್ತಿರುವ ಕೊಳಚೆ ನೀರನ್ನು ತೆರವುಗೊಳಿಸಿ, ಗ್ರಾಮದಲ್ಲಿ ಸ್ವಚ್ಛತೆ ಹಾಗೂ ಆರೋಗ್ಯಕರ ವಾತಾವರಣ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಮಸ್ಯೆ ಬಗೆಹರಿಸದ ಹಿನ್ನೆಲೆಯಲ್ಲಿ ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧವೂ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಧಾರಾಕಾರ ಮಳೆಗೆ ಬೆಂಗಳೂರು ತತ್ತರ ; ಹಲವೆಡೆ ನೀರು ನಿಂತು ಸಂಚಾರ ಅಸ್ತವ್ಯಸ್ತ!


















