ಬೆಂಗಳೂರು : ‘ಎಲೆಕ್ಟ್ರಿಕ್ ಕಾರ್ ಡಿಎನ್ಎ’ ಮತ್ತು ಅತ್ಯಾಧುನಿಕ ‘ಹೆಚ್ವಿ-ಟೆಕ್’ ತಂತ್ರಜ್ಞಾನ ಹೊಂದಿರುವ ಭಾರತದ ಮೊದಲ ಎಲೆಕ್ಟ್ರಿಕ್ ಮೋಟಾರ್ಸೈಕಲ್ ತಯಾರಕ ಕಂಪನಿಯಾದ ರ್ಯಾಪ್ಟಿ.ಹೆಚ್ವಿ (Raptee.HV), ಇಂದು ಬೆಂಗಳೂರಿನಲ್ಲಿ ತನ್ನ ಮೊದಲ ಹಂತದ ಮೋಟಾರ್ಸೈಕಲ್ ವಿತರಣೆ ಆರಂಭಿಸಿದೆ. ಇತ್ತೀಚೆಗಷ್ಟೇ ನಗರದಲ್ಲಿ ಕಂಪನಿಯ ಮೊದಲ ಶೋರೂಂ ಉದ್ಘಾಟನೆಗೊಂಡಿತ್ತು. ಇದರ ಬೆನ್ನಲ್ಲೇ ಈಗ ವಾಹನಗಳ ವಿತರಣೆಯೂ ಆರಂಭವಾಗಿದ್ದು, ರಿಟೇಲ್ ಮಾರುಕಟ್ಟೆಯ ಉಪಸ್ಥಿತಿಯಿಂದ ಗ್ರಾಹಕರ ಮಾಲೀಕತ್ವದತ್ತ ಕಂಪನಿಯು ಯಶಸ್ವಿ ಹೆಜ್ಜೆ ಇರಿಸಿದೆ.
ಪ್ರೀಮಿಯಂ ಮತ್ತು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಭಾರತದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿರುವ ಬೆಂಗಳೂರು, ಶೋರೂಂ ತೆರೆದ ದಿನದಿಂದಲೂ ರ್ಯಾಪ್ಟಿ.ಹೆಚ್ವಿ ಕಂಪನಿಯ ವಿಸ್ತರಣಾ ಯೋಜನೆಗಳಲ್ಲಿ ಅತ್ಯಂತ ಪ್ರಮುಖ ನಗರವಾಗಿದೆ. ವಾಹನಗಳ ವಿತರಣೆಯ ಆರಂಭವು ಈ ವಿಸ್ತರಣೆಯ ಮುಂದಿನ ಮೈಲಿಗಲ್ಲಾಗಿದೆ. ಮುಂಗಡ ಬುಕ್ಕಿಂಗ್ಗಳನ್ನು ಪೂರೈಸುವ ಮತ್ತು ನಗರದಾದ್ಯಂತ ಸವಾರರಿಗೆ ತನ್ನ ಎಲೆಕ್ಟ್ರಿಕ್ ಮೋಟಾರ್ಸೈಕಲ್ಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಂಪನಿ ಕಾರ್ಯಪ್ರವೃತ್ತವಾಗಿದೆ.
ರ್ಯಾಪ್ಟಿ.ಹೆಚ್ವಿಯ ಸಿಇಒ ಮತ್ತು ಸಹ-ಸಂಸ್ಥಾಪಕ ದಿನೇಶ್ ಅರ್ಜುನ್ ಈ ಕುರಿತು ಮಾತನಾಡಿ, “ಬೆಂಗಳೂರು ನಮಗೆ ಪ್ರಮುಖ ಮಾರುಕಟ್ಟೆಯಾಗಿದೆ. ಇಲ್ಲಿ ಗ್ರಾಹಕರಿಗೆ ವಿತರಣೆಯನ್ನು ಪ್ರಾರಂಭಿಸಿರುವುದು ರ್ಯಾಪ್ಟಿ.ಹೆಚ್ವಿಯ ಪಾಲಿಗೆ ಮಹತ್ವದ ಹೆಜ್ಜೆಯಾಗಿದೆ. ನಮ್ಮ ಆರಂಭಿಕ ಗ್ರಾಹಕರು ಬುಕ್ಕಿಂಗ್ ಹಂತದಿಂದ ವಾಹನದ ಮಾಲೀಕತ್ವವನ್ನು ಪಡೆಯುತ್ತಿರುವುದನ್ನು ನೋಡಲು ನಮಗೆ ಸಂತೋಷವಾಗುತ್ತಿದೆ. ಮುಂಬರುವ ತಿಂಗಳುಗಳಲ್ಲಿ ವಿತರಣೆಯನ್ನು ಮತ್ತಷ್ಟು ವೇಗಗೊಳಿಸುವತ್ತ ನಾವು ಗಮನ ಹರಿಸಿದ್ದೇವೆ. ಗ್ರಾಹಕರು ಕಾಯುವ ಸಮಯವನ್ನು (ವೈಟಿಂಗ್ ಪೀರಿಯಡ್) ಕಡಿಮೆ ಮಾಡಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ ಹಾಗೂ ಬೆಂಗಳೂರಿನ ಪ್ರತಿಯೊಬ್ಬ ಸವಾರರಿಗೂ ಸುಗಮ ಮತ್ತು ವಿಶ್ವಾಸಾರ್ಹ ಅನುಭವವನ್ನು ಒದಗಿಸಲು ನಾವು ಆದ್ಯತೆ ನೀಡುತ್ತೇವೆ,” ಎಂದು ತಿಳಿಸಿದರು.
ವಾಹನ ಖರೀದಿಯ ಬಳಿಕ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ, ರ್ಯಾಪ್ಟಿ.ಹೆಚ್ವಿ ಎಚ್ಎಸ್ಆರ್ ಲೇಔಟ್ನ 1ನೇ ಸೆಕ್ಟರ್ನಲ್ಲಿ ಸುಸಜ್ಜಿತವಾದ ‘ಸರ್ವೀಸ್ ಸೆಂಟರ್’ ಅನ್ನು ಸಹ ಸ್ಥಾಪಿಸಿದೆ. ನಾಲ್ವರು ನುರಿತ ಸಿಬ್ಬಂದಿಯನ್ನು ಒಳಗೊಂಡಿರುವ ಈ ಕೇಂದ್ರವು ಸೋಮವಾರದಿಂದ ಶನಿವಾರದವರೆಗೆ ಕಾರ್ಯನಿರ್ವಹಿಸಲಿದ್ದು, ನಗರದೊಳಗಿನ ಗ್ರಾಹಕರಿಗೆ ಮಾರಾಟದ ನಂತರದ (ಆಫ್ಟರ್-ಸೇಲ್ಸ್ ಸಪೋರ್ಟ್) ಅತ್ಯುತ್ತಮ ಸೇವೆಗಳನ್ನು ಒದಗಿಸಲಿದೆ.
ತನ್ನ ಶೋರೂಂ, ಸೇವಾ ಮೂಲಸೌಕರ್ಯ ಮತ್ತು ವಾಹನ ವಿತರಣಾ ಕಾರ್ಯಗಳು ಈಗ ಸಂಪೂರ್ಣವಾಗಿ ಕಾರ್ಯಾಚರಣೆಗೆ ಬಂದಿರುವುದರಿಂದ, ಭಾರತದ ಪ್ರಮುಖ ಮಾರುಕಟ್ಟೆಗಳಲ್ಲಿನ ತನ್ನ ವ್ಯಾಪಕ ವಿಸ್ತರಣೆಯ ಭಾಗವಾಗಿ ರ್ಯಾಪ್ಟಿ.ಹೆಚ್ವಿ ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುತ್ತಿದೆ. ಎಲೆಕ್ಟ್ರಿಕ್ ಮೋಟಾರ್ಸೈಕಲ್ ವಿಭಾಗದಲ್ಲಿ ತನ್ನ ಛಾಪು ಮೂಡಿಸುತ್ತಿರುವಂತೆಯೇ, ಕಂಪನಿಯು ತನ್ನ ರಿಟೇಲ್, ವಿತರಣೆ ಮತ್ತು ಗ್ರಾಹಕ ಬೆಂಬಲ ಜಾಲವನ್ನು ಇನ್ನಷ್ಟು ವಿಸ್ತರಿಸುವುದನ್ನು ಮುಂದುವರಿಸಲಿದೆ.
ಇದನ್ನೂ ಓದಿ : ಅ.28ರಂದು WPL ಆಟಗಾರ್ತಿಯರ ಹರಾಜು ; ಬೆಂಗಳೂರು ಸೇರಿ ಹಲವು ನಗರಗಳ ಮೇಲೆ ಬಿಸಿಸಿಐ ಕಣ್ಣು!


















