ಬೆಂಗಳೂರು : ದೇಶದ ಕೋಟ್ಯಂತರ ಖಾಸಗಿ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರವು ಗುಡ್ ನ್ಯೂಸ್ ನೀಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಯ (ಇಪಿಎಫ್ಒ) ಅಡಿಯಲ್ಲಿ ವೇತನದ ಮಿತಿಯನ್ನು ಕೇಂದ್ರ ಸರ್ಕಾರವು 15 ಸಾವಿರ ರೂಪಾಯಿಯಿಂದ 25 ಸಾವಿರ ರೂಪಾಯಿಗೆ ಏರಿಕೆ ಮಾಡಿದೆ. ಇದರಿಂದಾಗಿ ಹೆಚ್ಚುವರಿಯಾಗಿ 51 ಲಕ್ಷ ಜನರಿಗೆ ಪಿಎಫ್ ಸೌಲಭ್ಯ ದೊರೆಯುವ ಜತೆಗೆ ಪಿಂಚಣಿದಾರರಿಗೆ ಭಾರಿ ಅನುಕೂಲವಾಗಲಿದೆ.
ಹೊಸ ವೇತನ ಮಿತಿಯು ಸೆಪ್ಟೆಂಬರ್ 17ರಿಂದಲೇ ಜಾರಿಗೆ ಬಂದಿದೆ. ವೇತನ ಮಿತಿಯ ಏರಿಕೆಯಿಂದಾಗಿ 15 ಸಾವಿರ ರೂ.ನಿಂದ 25 ಸಾವಿರ ರೂ.ವರೆಗೆ ಬೇಸಿಕ್ (ಡಿಎ ಸೇರಿ) ಸಂಬಳ ಪಡೆಯುತ್ತಿರುವ ಸುಮಾರು 51 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಪಿಎಫ್ ಲಭಿಸಲಿದೆ. ಅಂದರೆ, 25 ಸಾವಿರ ರೂ.ವರೆಗೆ ಸಂಬಳ ಇರುವವರು ಕೂಡ ಸಾಮಾಜಿಕ ಭದ್ರತಾ ಯೋಜನೆಯ ಲಾಭ ಪಡೆಯಲಿದ್ದಾರೆ. ಇದುವರೆಗೆ 15 ಸಾವಿರ ರೂ.ಗಿಂತ ಹೆಚ್ಚಿನ ಸಂಬಳ ಹೊಂದಿದವರಿಗೆ ಪಿಎಫ್ ಕಡ್ಡಾಯವಾಗಿರಲಿಲ್ಲ.
ಖಾಸಗಿ ಕಂಪನಿಗಳು ಈಗ 15 ಸಾವಿರ ರೂ. ಮೂಲ ವೇತನ ಲೆಕ್ಕದಲ್ಲಿ ಶೇ. 12ರಷ್ಟು ಹಣವನ್ನು ಕೊಡುಗೆಯಾಗಿ ನೀಡುತ್ತಿವೆ. ಈಗ 25 ಸಾವಿರ ರೂ. ಲೆಕ್ಕದಲ್ಲಿ ಅವುಗಳು ಕನಿಷ್ಠ ಕೊಡುಗೆ ನೀಡಬೇಕಾಗುತ್ತದೆ. ಅಂದರೆ, 3 ಸಾವಿರ ರೂಪಾಯಿಯನ್ನು ಕಂಪನಿ ವತಿಯಿಂದ ಉದ್ಯೋಗಿಯ ಇಪಿಎಫ್ ಮತ್ತು ಇಪಿಎಸ್ ಖಾತೆಗಳಿಗೆ ನೀಡಬೇಕಾಗುತ್ತದೆ.
ವೇತನ ಮಿತಿಯ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ವಾರ್ಷಿಕ ಅಂದಾಜು 11,339 ಕೋಟಿ ರೂಪಾಯಿಯನ್ನು ವ್ಯಯಿಸಲಿದೆ. ಮುಂದಿನ 5 ವರ್ಷಗಳಲ್ಲಿ ಹೆಚ್ಚುವರಿಯಾಗಿ ಒಟ್ಟು 56,696 ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕಾಗುತ್ತದೆ. 2014ರಲ್ಲಿ ಕೇಂದ್ರ ಸರ್ಕಾರವು ಇಪಿಎಫ್ಒ ವೇತನ ಮಿತಿಯನ್ನು 6,500 ರೂ.ನಿಂದ 15 ಸಾವಿರ ರೂ.ಗೆ ಏರಿಕೆ ಮಾಡಿತ್ತು. ಈಗ 12 ವರ್ಷಗಳ ಬಳಿಕ ವೇತನದ ಮಿತಿ ಏರಿಕೆ ಮಾಡಿರುವುದು ಖಾಸಗಿ ಕಂಪನಿ ಉದ್ಯೋಗಿಗಳಿಗೆ ಅನುಕೂಲ ಮಾಡಿಕೊಡಲಿದೆ.
ಇದನ್ನೂ ಓದಿ : ಕೋರ್ಟ್‌ನಿಂದ ಕ್ರಿಕೆಟ್ ಮೈದಾನಕ್ಕೆ ಆ್ಯಶ್ ಬಾರ್ಟಿ ; 10 ವರ್ಷಗಳ ಬಳಿಕ ಮತ್ತೆ ಬ್ಯಾಟ್ ಹಿಡಿಯಲಿರುವ ಟೆನಿಸ್ ದಿಗ್ಗಜೆ!


















