ಬ್ರಿಸ್ಭೇನ್ : ಟೆನಿಸ್ ಲೋಕದಲ್ಲಿ ವಿಶ್ವದ ಅಗ್ರ ಆಟಗಾರ್ತಿಯಾಗಿ ಮಿಂಚಿ, ಮೂರು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದು ವೃತ್ತಿಜೀವನಕ್ಕೆ ವಿದಾಯ ಹೇಳಿದ್ದ ಆಸ್ಟ್ರೇಲಿಯಾದ ಆ್ಯಶ್ ಬಾರ್ಟಿ ಇದೀಗ ಮತ್ತೆ ಕ್ರಿಕೆಟ್ ಮೈದಾನಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಸುಮಾರು ಒಂದು ದಶಕದ ಬಳಿಕ ಬಾರ್ಟಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುತ್ತಿದ್ದು, ನವೆಂಬರ್ 22ರಂದು ನಡೆಯಲಿರುವ ಕೇರ್ನ್ಸ್ ಗೋಲ್ಡ್ ಕ್ಲ್ಯಾಶ್ ಟಿ20 ಪಂದ್ಯದಲ್ಲಿ ಆಡಲಿದ್ದಾರೆ.
ಆಸ್ಟ್ರೇಲಿಯಾದ ಕೇರ್ನ್ಸ್‌ನ ಕಜಲಿಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ವಿಶೇಷ ಟಿ20 ಪಂದ್ಯದಲ್ಲಿ ಆ್ಯಶ್ ಬಾರ್ಟಿ ಟೀಮ್ ಕ್ರಿಕೆಟ್ ಪರ ಆಡಲಿದ್ದಾರೆ. ಎದುರಾಳಿ ತಂಡವಾಗಿ ಟೀಮ್ ಫುಟಿ ಕಣಕ್ಕಿಳಿಯಲಿದೆ. ಆಸ್ಟ್ರೇಲಿಯಾದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಈ ರೀತಿಯ ವಿಶೇಷ ಪಂದ್ಯಕ್ಕೆ ಕ್ರೀಡಾ ಕ್ಷೇತ್ರದ ಹಲವು ಗಣ್ಯರು ಸಾಥ್ ನೀಡಲಿದ್ದಾರೆ. ಬ್ರಿಯಾನ್ ಲಾರಾ, ಉಸ್ಮಾನ್ ಖವಾಜಾ, ಮ್ಯಾಥ್ಯೂ ಹೇಡನ್, ಮೈಕ್ ಹಸ್ಸಿ ಮತ್ತು ಜೊನಾಥನ್ ಥರ್ಸ್ಟನ್ ಸೇರಿದಂತೆ ಹಲವು ಖ್ಯಾತ ಕ್ರೀಡಾಪಟುಗಳು ಪಂದ್ಯದಲ್ಲಿ ಭಾಗವಹಿಸಲಿದ್ದಾರೆ.
ಟೆನಿಸ್‌ನಿಂದ ಕ್ರಿಕೆಟ್‌ಗೆ ಬಾರ್ಟಿಯ ಹಳೆಯ ನಂಟು
ಆ್ಯಶ್ ಬಾರ್ಟಿಗೆ ಕ್ರಿಕೆಟ್ ಹೊಸ ಕ್ರೀಡೆಯಲ್ಲ. 2014ರ ಯುಎಸ್ ಓಪನ್ ಬಳಿಕ ವೃತ್ತಿಪರ ಟೆನಿಸ್‌ನಿಂದ ಸುಮಾರು 18 ತಿಂಗಳ ವಿರಾಮ ಪಡೆದಿದ್ದ ಸಂದರ್ಭದಲ್ಲಿ ಅವರು ಕ್ರಿಕೆಟ್‌ನತ್ತ ಗಮನ ಹರಿಸಿದ್ದರು. ಕ್ವೀನ್ಸ್‌ಲ್ಯಾಂಡ್ ಮಹಿಳಾ ತಂಡದೊಂದಿಗೆ ತರಬೇತಿ ಪಡೆದ ಬಾರ್ಟಿ, ಬ್ರಿಸ್ಬೇನ್‌ನ ವೆಸ್ಟರ್ನ್ ಸಬರ್ಬ್ಸ್ ಜಿಲ್ಲಾ ಕ್ರಿಕೆಟ್ ಕ್ಲಬ್ ಪರವೂ ಆಡಿದ್ದರು. ನಂತರ ಅವರು ಮೊದಲ ಮಹಿಳಾ ಬಿಗ್ ಬ್ಯಾಷ್ ಲೀಗ್‌ಗಾಗಿ ಬ್ರಿಸ್ಬೇನ್ ಹೀಟ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡರು. 2015ರ ಡಿಸೆಂಬರ್ 5ರಂದು ಮೆಲ್ಬರ್ನ್ ಸ್ಟಾರ್ಸ್ ವಿರುದ್ಧ ಬಿಗ್ ಬ್ಯಾಷ್ ಲೀಗ್‌ಗೆ ಪದಾರ್ಪಣೆ ಮಾಡಿದ ಅವರು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಕೇವಲ 27 ಎಸೆತಗಳಲ್ಲಿ 39 ರನ್ ಗಳಿಸಿದ್ದರು. ಆ ಇನ್ನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಕೂಡ ಸೇರಿತ್ತು. 2015-16ರ ಋತುವಿನಲ್ಲಿ ಬ್ರಿಸ್ಬೇನ್ ಹೀಟ್ ಪರ ಒಟ್ಟು ಒಂಬತ್ತು ಪಂದ್ಯಗಳಲ್ಲಿ ಆಡಿದ ಬಾರ್ಟಿ, ಏಳು ಇನ್ನಿಂಗ್ಸ್‌ಗಳಲ್ಲಿ 68 ರನ್ ಗಳಿಸಿದ್ದರು.
ಕ್ರಿಕೆಟ್ ವಿರಾಮದ ಬಳಿಕ ಟೆನಿಸ್‌ನಲ್ಲಿ ಐತಿಹಾಸಿಕ ಸಾಧನೆ
2016ರ ಆರಂಭದಲ್ಲಿ ಬಾರ್ಟಿ ಮತ್ತೆ ಟೆನಿಸ್‌ಗೆ ಮರಳಿದರು. ಆ ಬಳಿಕ ಅವರ ವೃತ್ತಿಜೀವನ ಹೊಸ ಎತ್ತರ ತಲುಪಿತು. 2019ರಲ್ಲಿ ಫ್ರೆಂಚ್ ಓಪನ್ ಗೆದ್ದು ತಮ್ಮ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಪಡೆದ ಅವರು, 2021ರಲ್ಲಿ ವಿಂಬಲ್ಡನ್ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡರು. 2022ರ ಆಸ್ಟ್ರೇಲಿಯನ್ ಓಪನ್ ಗೆದ್ದು ಮೆಲ್ಬರ್ನ್ ಪಾರ್ಕ್‌ನಲ್ಲಿ ಸಿಂಗಲ್ಸ್ ಪ್ರಶಸ್ತಿ ಗೆದ್ದ 44 ವರ್ಷಗಳ ಬಳಿಕದ ಮೊದಲ ಆಸ್ಟ್ರೇಲಿಯಾದ ಮಹಿಳೆ ಎಂಬ ದಾಖಲೆ ಬರೆದರು.
2022ರ ಮಾರ್ಚ್‌ನಲ್ಲಿ ವಿಶ್ವದ ನಂಬರ್ ಒನ್ ಸ್ಥಾನದಲ್ಲಿದ್ದಾಗಲೇ ಬಾರ್ಟಿ ವೃತ್ತಿಪರ ಟೆನಿಸ್‌ಗೆ ವಿದಾಯ ಘೋಷಿಸಿದರು. ಅವರ ಟೆನಿಸ್ ವೃತ್ತಿಜೀವನದಲ್ಲಿ ಒಟ್ಟು ಮೂರು ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗಳಿದ್ದು, 121 ವಾರಗಳ ಕಾಲ ವಿಶ್ವ ನಂಬರ್ ಒನ್ ಸ್ಥಾನದಲ್ಲಿದ್ದರು.
ಕ್ರಿಕೆಟ್‌ಗೆ ಮರಳುತ್ತಿರುವ ಬಾರ್ಟಿಯ ಈ ನಿರ್ಧಾರ ಇದೀಗ ಕ್ರೀಡಾಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಟೆನಿಸ್‌ನಲ್ಲಿ ವಿಶ್ವದ ಅಗ್ರಸ್ಥಾನಕ್ಕೇರಿದ್ದ ಈ ಆಟಗಾರ್ತಿ ಮತ್ತೆ ಬ್ಯಾಟ್ ಹಿಡಿದು ಮೈದಾನಕ್ಕಿಳಿಯುತ್ತಿರುವುದು ವಿಶೇಷವಾಗಿದೆ.
ಇದನ್ನೂ ಓದಿ : ಶ್ರೀಲಂಕಾ ವಿರುದ್ಧ ಶತಕ ಸಿಡಿಸಿದ ಹ್ಯಾರಿ ಬ್ರೂಕ್ ; ‘ಹೀರೋ’ ಕೆವಿನ್ ಪೀಟರ್‌ಸನ್‌ರಿಂದ ಕಲಿಯಲು ಕಾತರ!



















