ಬೆಂಗಳೂರು : ರಾಜ್ಯ ಲೋಕೋಪಯೋಗಿ (PWD) ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಳೆದ ಜೂನ್ ತಿಂಗಳಿನಲ್ಲಿ ಸತೀಶ್ ಜಾರಕಿಹೊಳಿ ಅವರ ಆಪ್ತ ಸಂಬಂಧಿ ಹಾಗೂ ಅಬಕಾರಿ ಇಲಾಖೆ ಅಧಿಕಾರಿಯಾಗಿದ್ದ ವೈ. ಮಂಜುನಾಥ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ಬೃಹತ್ ದಾಳಿ ನಡೆಸಿ ಶಾಕ್ ನೀಡಿದ್ದರು. ಆ ಘಟನೆ ಮಾಸುವ ಮುನ್ನವೇ, ಇದೀಗ ಇ.ಡಿ ಅಧಿಕಾರಿಗಳು ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಿ ಬಿಗ್ ಶಾಕ್ ನೀಡಿದ್ದಾರೆ.
ಇಂದು ಬೆಳಿಗ್ಗೆ ಎರಡು ಪ್ರತ್ಯೇಕ ಕಾರುಗಳಲ್ಲಿ ಆಗಮಿಸಿದ ಇಡಿ ಅಧಿಕಾರಿಗಳ ತಂಡವು ಸಚಿವರ ಮನೆಯೊಳಗೆ ಪ್ರವೇಶಿಸಿ ಪರಿಶೀಲನೆ ಆರಂಭಿಸಿದೆ. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಬಾರ್ ಲೈಸೆನ್ಸ್ ಅಕ್ರಮ ಹಾಗೂ ಹವಾಲಾ ಹಣಕಾಸು ವ್ಯವಹಾರದ ಲಿಂಕ್ ಆಧಾರದ ಮೇಲೆ ಈ ಶೋಧ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಮನೆಯಲ್ಲಿರುವ ಪ್ರಮುಖ ದಾಖಲೆಗಳು, ಆಸ್ತಿ ಪತ್ರಗಳು ಮತ್ತು ಬ್ಯಾಂಕ್ ಖಾತೆಗಳ ವಿವರಗಳನ್ನು ತೀವ್ರ ತನಿಖೆಗೆ ಒಳಪಡಿಸಲಾಗುತ್ತಿದ್ದು, ಪ್ರಮುಖ ಸಾಕ್ಷ್ಯಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಸಚಿವರ ನಿವಾಸದ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಜೂನ್ ತಿಂಗಳಿನಲ್ಲಿ ಬೆಳಗಾವಿ ವಿಭಾಗದ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಮನೆ ಸೇರಿದಂತೆ ಬೆಂಗಳೂರು, ಬೆಳಗಾವಿ, ಮೈಸೂರು ಹಾಗೂ ಅಥಣಿ ಪ್ರದೇಶಗಳಲ್ಲಿ ಇಡಿ ಸುದೀರ್ಘ ದಾಳಿ ನಡೆಸಿತ್ತು. ಬಾರ್ ಲೈಸೆನ್ಸ್ ನೀಡುವಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ನಡೆದಿದ್ದ ಆ ಕಾರ್ಯಾಚರಣೆಯ ವೇಳೆ ಮಂಜುನಾಥ್ ಮನೆಯಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್, 5.5 ಲಕ್ಷ ರೂ. ನಗದು ಹಾಗೂ ಬರೋಬ್ಬರಿ 13.3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು. ವಿದೇಶಿ ಅಕ್ರಮ ಹಣ ಹಾಗೂ ಹವಾಲಾ ಜಾಲದ ಕೊಂಡಿ ಸಚಿವರಿಗೂ ತಲುಪಿದೆ ಎಂಬ ಶಂಕೆಯ ಮೇಲೆ ಇದೀಗ ಸಚಿವರ ಮನೆ ಮೇಲೆಯೂ ದಾಳಿ ಮುಂದುವರಿದಿದೆ.
ಇದನ್ನೂ ಓದಿ : ವಿಮಾನವನ್ನು ಹೋಲುವ ಐಷಾರಾಮಿ ಸೌಲಭ್ಯ, ಶವರ್ಮಾ, ಉಚಿತ ವೈಫೈ : KSRTCಯ ಹೊಸ ಬಸ್‌ಗೆ ನೆಟ್ಟಿಗರು ಫಿದಾ!



















