ಲಕ್ನೋ : ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಗನಿಗೆ ನೀಡಿದ ಭರವಸೆಗಳನ್ನು ಈಡೇರಿಸದೆ, ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ನಿರಂತರ ಅಲೆದಾಟದಿಂದ ಬೇಸತ್ತ 80 ವರ್ಷದ ವೃದ್ಧ ತಾಯಿಯೊಬ್ಬರು ತಮಗೆ ಸಿಕ್ಕ ಗೌರವ ಹಾಗೂ ‘ಶೌರ್ಯ ಚಕ್ರ‘ ಪದಕವನ್ನು ಸರ್ಕಾರಕ್ಕೆ ವಾಪಸ್ ನೀಡಲು ನಿರ್ಧರಿಸಿದ್ದಾರೆ. ಮಣಿಪುರದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ವೀರಮರಣ ಅಪ್ಪಿದ ಬಿಎಸ್‌ಎಫ್ ಮಾಜಿ ಅಸಿಸ್ಟೆಂಟ್ ಕಮಾಂಡೆಂಟ್ ವಿವೇಕ್ ಸಕ್ಸೇನಾ ಅವರ ತಾಯಿ ಸಾವಿತ್ರಿ ದೇವಿ ಅವರು ಈ ನೋವಿನ ನಿರ್ಧಾರ ಕೈಗೊಂಡಿದ್ದು, ಸರ್ಕಾರದ ಅಸಂವೇದನಾಶೀಲತೆಗೆ ಕನ್ನಡಿ ಹಿಡಿದಿದ್ದಾರೆ.
22 ವರ್ಷಗಳಿಂದ ಕಚೇರಿಗಳಿಗೆ ಅಲೆದಾಟ
ಜನವರಿ 8, 2003 ರಂದು ಮಣಿಪುರದಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ವಿವೇಕ್ ಸಕ್ಸೇನಾ ವೀರಮರಣ ಹೊಂದಿದ್ದರು. ಅವರ ಸಾಹಸಕ್ಕೆ ಗೌರವವಾಗಿ ಮರಣೋತ್ತರ ‘ಶೌರ್ಯ ಚಕ್ರ’ ಮತ್ತು ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ನೀಡಲಾಗಿತ್ತು. ಆ ವೇಳೆ ಉತ್ತರ ಪ್ರದೇಶ ಸರ್ಕಾರ ಹುತಾತ್ಮ ಯೋಧನ ನೆನಪಿಗಾಗಿ ಸ್ಮಾರಕ ಉದ್ಯಾನವನ ಹಾಗೂ ಭೂಮಿ ನೀಡುವ ಭರವಸೆ ನೀಡಿತ್ತು. ಆದರೆ, ಘಟನೆ ನಡೆದು 22 ವರ್ಷಗಳು ಕಳೆದರೂ ಸರ್ಕಾರ ನೀಡಿದ್ದ ಯಾವುದೇ ಭರವಸೆಗಳು ಈಡೇರಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಲನಿವಾಸಿ ಪುರಾವೆ ನೆಪದಲ್ಲಿ ಅಧಿಕಾರಿಗಳಿಂದ ಕಿರುಕುಳ
ಹುತಾತ್ಮ ಯೋಧನ ಸಹೋದರ ರಂಜಿತ್ ಮಾತನಾಡಿ, 2016 ರಲ್ಲಿ ಜಮೀನು ನೀಡುವ ಪ್ರಕ್ರಿಯೆ ಆರಂಭವಾದರೂ, ಅಧಿಕಾರಿಗಳು ಉತ್ತರ ಪ್ರದೇಶದ ಮೂಲನಿವಾಸಿ ಎಂಬುದಕ್ಕೆ ಪುರಾವೆ ಕೇಳಲು ಪ್ರಾರಂಭಿಸಿದರು. “ನಾವು ಬೆಳೆದಿದ್ದು, ಓದಿದ್ದು ಇಲ್ಲೇ. ನಮ್ಮ ಸಹೋದರನ ಸ್ಮಾರಕವೂ ಏರ್‌ಫೋರ್ಸ್ ಸ್ಟೇಷನ್‌ನಲ್ಲಿದೆ. ಆದರೂ ತಾಯಿಯ ಮದುವೆಗೆ ಮುಂಚಿನ ನಿವಾಸದ ಅಫಿಡವಿಟ್ ಕೇಳಿ ಕಿರುಕುಳ ನೀಡಲಾಯಿತು” ಎಂದು ಆರೋಪಿಸಿದ್ದಾರೆ. ಅಲ್ಲದೆ, ‘ಶೌರ್ಯ ಚಕ್ರ’ ಗೌರವಕ್ಕೆ ಸಂಬಂಧಿಸಿದ ಹಣಕಾಸಿನ ನೆರವು ಪಡೆಯಲು 2024 ರವರೆಗೆ ಕಾಯಬೇಕಾಯಿತು ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಪದಕ ವಾಪಸ್ ಮಾಡಲು ರಾಷ್ಟ್ರಪತಿ, ಸಿಎಂ ಭೇಟಿಗೆ ಮನವಿ
80 ವರ್ಷದ ವೃದ್ಧಾಪ್ಯದಲ್ಲೂ ಸರ್ಕಾರಿ ಕಚೇರಿಗಳಿಗೆ ಅಲೆಯುವ ಶಕ್ತಿ ತಮಗಿಲ್ಲ ಎಂದಿರುವ ಸಾವಿತ್ರಿ ದೇವಿ, “ಮಗ ದೇಶಕ್ಕಾಗಿ ಪ್ರಾಣ ತೆತ್ತಿ 22 ವರ್ಷಗಳಾದರೂ ನಮಗೆ ಜಮೀನು ನೀಡಲು ಹೀಗೆ ಅಪಮಾನ ಮಾಡುವುದಾದರೆ, ಸರ್ಕಾರ ನೀಡಿದ ಶೌರ್ಯ ಚಕ್ರ, ಇತರ ಪದಕಗಳು ಮತ್ತು ಗೌರವ ಧನವನ್ನು ನಮಗೆ ಇಟ್ಟುಕೊಳ್ಳಲು ಇಷ್ಟವಿಲ್ಲ. ಅದನ್ನು ವಾಪಸ್ ಪಡೆಯಿರಿ” ಎಂದು ಕಣ್ಣೀರಿಟ್ಟಿದ್ದಾರೆ. ಇವರು ಪದಕ ವಾಪಸ್ ನೀಡಲು ರಾಷ್ಟ್ರಪತಿಗಳು ಹಾಗೂ ಮುಖ್ಯಮಂತ್ರಿಗಳ ಭೇಟಿಗೆ ಕಾಲಾವಕಾಶ ಕೋರಿದ್ದಾರೆ. ಈ ವಿಚಾರ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಪ್ರಕರಣದ ತನಿಖೆ ನಡೆಸಿ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವಂತೆ ಉಪ ಜಿಲ್ಲಾಧಿಕಾರಿ (SDM) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಶಿವಶಂಕರಪ್ಪ ಸಾಹುಕಾರ್‌ಗೆ ಬಿಗ್ ಶಾಕ್ ; ನಿರೀಕ್ಷಣಾ ಜಾಮೀನು ಅರ್ಜಿ ವಜಾ.. ಬಂಧನ ಭೀತಿ!


















