ಧಾರವಾಡ : ಧಾರವಾಡದಲ್ಲಿ ನಡೆದ ತಿರಂಗಾ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಚಿಂತಕ ಚಕ್ರವರ್ತಿ ಸೂಲಿಬೆಲೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದಿದ್ದಾರೆ. ಬೆಂಗಳೂರಿನಲ್ಲಿ ತಿರಂಗಾ ರ‍್ಯಾಲಿಗೆ ಅನುಮತಿ ನಿರಾಕರಿಸಿದ ವಿಚಾರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿರುವ ಅವರು, “ಬೆಂಗಳೂರಿನಲ್ಲಿ ತಡೆಹಿಡಿಯಬಹುದು, ಆದರೆ ರಾಜ್ಯದ ಮೂಲೆ ಮೂಲೆಯಲ್ಲಿ ತಿರಂಗಾ ಯಾತ್ರೆ ಮಾಡ್ತೀವಿ. ಹೇಗೆ ತಡೆಹಿಡಿಯುತ್ತೀರಿ ನೋಡೋಣ” ಎಂದು ಸವಾಲು ಹಾಕಿದ್ದಾರೆ.
ಕಳೆದ ಎರಡು ದಿನಗಳಿಂದ ತಮ್ಮ ಮೇಲೆ ಎಫ್‌ಐಆರ್ ದಾಖಲಿಸುವುದಾಗಿ ಹೆದರಿಸಲಾಗುತ್ತಿದೆ ಎಂದು ಆರೋಪಿಸಿದ ಸೂಲಿಬೆಲೆ, “ಕಾರಿನ ಮೇಲೆ ನಿಂತು ಮಾತನಾಡುತ್ತಿರುವವನು ನಾನೇನಾ? ಪೊಲೀಸರು ಎಫ್‌ಐಆರ್ ಹಾಕುವಂತಿದ್ದರೆ, ಜೀಪ್ ಮೇಲೆ ನಿಂತುಕೊಂಡಿದ್ದೇನೆ, ಹಾಕು ಬಾ” ಎಂದು ಪೊಲೀಸ್ ಇಲಾಖೆಗೆ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ 4 ಸಾವಿರ ಜನರನ್ನು ಸೇರಿಸಿ ತಿರಂಗಾ ರ‍್ಯಾಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ರ‍್ಯಾಲಿಗೆ ಎರಡು ದಿನ ಮುಂಚೆ ಬೆಂಗಳೂರು ಡಿಸಿಪಿ ಪತ್ರ ನೀಡಿ ಅನುಮತಿ ನಿರಾಕರಿಸಿದ್ದಾರೆ. ರ‍್ಯಾಲಿಗೆ ಯಾಕೆ ಅನುಮತಿ ನೀಡುತ್ತಿಲ್ಲ ಎಂದು ಕೇಳಿದಾಗ, “ನಿಮಗೆ ರಕ್ಷಣೆ ಕೊಡಲು ಸಿಬ್ಬಂದಿ ಇಲ್ಲ” ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಸೂಲಿಬೆಲೆ ಹೇಳಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಇಲ್ಲದಿದ್ದರೆ, ಯುವ ಬ್ರಿಗೇಡ್‌ನ ಯುವಕರು ಇದ್ದಾರೆ, ಅವರೇ ರಕ್ಷಣೆ ನೀಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಧಾರವಾಡದಲ್ಲಿ “ವಿಜಯೀಭವ” ಹೆಸರಿನಲ್ಲಿ ತಿರಂಗಾ ಯಾತ್ರೆ ನಡೆಸಿದ್ದೇವೆ. ವಿಜಯೀಭವ ಎಂದರೆ ಗೆಲ್ಲಲಿ ಎಂಬ ಅರ್ಥ ಎಂದು ಹೇಳಿದ ಸೂಲಿಬೆಲೆ, ಕಳೆದ ಒಂದು ತಿಂಗಳಿಂದ ಜೆನ್‌ಝಡ್ ಪೀಳಿಗೆಯನ್ನು ದೇಶದ ವಿರೋಧಿಗಳಂತೆ ಬಿಂಬಿಸಲಾಗುತ್ತಿದೆ. ಆದರೆ ಭಾರತದ ಹೊಸ ಪೀಳಿಗೆ ದೇಶದ ಪರವಾಗಿದೆ ಎಂಬುದು ಇದೀಗ ಗೊತ್ತಾಗಿದೆ ಎಂದರು.
“ಜೆನ್‌ಝಡ್ ಪೀಳಿಗೆ ಕಲ್ಲು ಹೊಡೆಯಲು, ಸಂಸತ್ತಿಗೆ ಬೆಂಕಿ ಹಚ್ಚಲು ಹುಟ್ಟಿಲ್ಲ. ದೇಶದ ಗೌರವವನ್ನು ಮುಗಿಲೆತ್ತರಕ್ಕೆ ಕೊಂಡೊಯ್ಯಲು ಹುಟ್ಟಿಕೊಂಡಿರುವ ಪೀಳಿಗೆ” ಎಂದು ಸೂಲಿಬೆಲೆ ಹೇಳಿದರು. ಧಾರವಾಡದ ಯುವಕರಿಗೆ ಧನ್ಯವಾದ ಸಲ್ಲಿಸಿದ ಅವರು, ಕೈಯಲ್ಲಿ ತಿರಂಗಾ ಹಿಡಿದು ರ‍್ಯಾಲಿಯಲ್ಲಿ ಭಾಗವಹಿಸಿ, ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಯುವಕರನ್ನು ಶ್ಲಾಘಿಸಿದರು.
ಪರೀಕ್ಷಾ ಅಕ್ರಮಗಳ ವಿಚಾರದಲ್ಲೂ ಸರ್ಕಾರವನ್ನು ಪ್ರಶ್ನಿಸಿದ ಸೂಲಿಬೆಲೆ, ಕರ್ನಾಟಕದಲ್ಲಿ ಪರೀಕ್ಷೆ ಲೀಕ್ ಆದಾಗ ಯಾರೂ ಮಾತನಾಡಲಿಲ್ಲ, ಜಾರ್ಖಂಡ್‌ನಲ್ಲೂ ಪರೀಕ್ಷೆ ಲೀಕ್ ಆದಾಗ ಯಾರೂ ಮಾತನಾಡಲಿಲ್ಲ. ಆದರೆ ದೆಹಲಿಯಲ್ಲಿ ಮಾತ್ರ ಪ್ರತಿಭಟನೆ ಯಾಕೆ ನಡೆಯಬೇಕು ಎಂದು ಪ್ರಶ್ನಿಸಿದರು.
“ಇವತ್ತು ಧಾರವಾಡದ ಯುವಕರು ತಿರಂಗಾ ಹಿಡಿದು ರಸ್ತೆಗೆ ಬಂದಿರುವುದು ಗೃಹ ಸಚಿವರಿಗೆ ರಸ್ತೆಯಲ್ಲಿ ನಿಂತು ಕಪಾಳಕ್ಕೆ ಹೊಡೆದಂತಾಗಿದೆ. ನನಗೆ ಹಾಲು ಕುಡಿದಷ್ಟು ಸಂತೋಷವಾಗಿದೆ” ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಬೀಗರ ಔತಣ ಮುಗಿಸಿ ವಾಪಸ್ ಬರುತ್ತಿದ್ದ ಟೆಂಪೋ ಪಲ್ಟಿ ; 13ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ!



















