ಬೆಂಗಳೂರು : ನಿಯಮಬಾಹಿರವಾಗಿ ಔಷಧಗಳನ್ನು ಸಂಗ್ರಹಿಸಿ ವಿತರಿಸುತ್ತಿದ್ದ ಆರೋಪದ ಹಿನ್ನೆಲೆ ಕರ್ನಾಟಕ ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಇಲಾಖೆ (ಎಫ್ಡಿಎ) ಅಧಿಕಾರಿಗಳು ರಾಜ್ಯದ ವಿವಿಧೆಡೆ ಅನಧಿಕೃತ ಇ-ಕಾಮರ್ಸ್ ಸಂಸ್ಥೆಗಳ ಆವರಣಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಎಫ್ಡಿಎ ಅಮಲುಜಾರಿ ಔಷಧ ವಿಭಾಗದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು ₹4,02,352 ಮೌಲ್ಯದ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನ ಆನೇಕಲ್ ತಾಲೂಕಿನ ತಟ್ಟನಹಳ್ಳಿಯಲ್ಲಿರುವ ಮೆಸರ್ಸ್ ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ನ ಪರವಾನಗಿ ರಹಿತ ಆವರಣದ ಮೇಲೆ ದಾಳಿ ನಡೆಸಿದಾಗ, ಕಾನೂನುಬಾಹಿರವಾಗಿ ಔಷಧಗಳನ್ನು ಸಂಗ್ರಹಿಸಿರುವುದು ಪತ್ತೆಯಾಗಿದೆ. ಈ ವೇಳೆ ₹2,45,352 ಮೌಲ್ಯದ ಔಷಧಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ರಾಜ್ಯ ಗುಪ್ತದಳ ವಿಭಾಗದ ಸಹಾಯಕ ಔಷಧ ನಿಯಂತ್ರಕ ಮನೋಹರ್ ಹಾಗೂ ಔಷಧ ಪರಿವೀಕ್ಷಕರ ತಂಡ ಈ ಕಾರ್ಯಾಚರಣೆ ನಡೆಸಿದೆ.
ಇದೇ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಏರೋಸ್ಪೇಸ್ನಲ್ಲಿರುವ ಮೆಸರ್ಸ್ ಅಮೆಜಾನ್ ಸಂಸ್ಥೆಯ ಪರವಾನಗಿ ರಹಿತ ಆವರಣದ ಮೇಲೂ ಎಫ್ಡಿಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರವಾನಗಿ ಇಲ್ಲದ ಆವರಣದಲ್ಲಿ ಅಕ್ರಮವಾಗಿ ಔಷಧ ದಾಸ್ತಾನು ಮಾಡಿರುವುದು ಪತ್ತೆಯಾಗಿದ್ದು, ₹1,57,000 ಮೌಲ್ಯದ ಔಷಧಗಳನ್ನು ಜಪ್ತಿ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಔಷಧ ಪರಿವೀಕ್ಷಕಿ ವಿಭಾ ಹಾಗೂ ಅವರ ತಂಡ ಈ ಕಾರ್ಯಾಚರಣೆ ನಡೆಸಿದೆ.
ಪರವಾನಗಿ ಇಲ್ಲದೆ ಔಷಧಗಳ ಸಂಗ್ರಹಣೆ ಹಾಗೂ ವಿತರಣೆಯಲ್ಲಿ ತೊಡಗಿರುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಫ್ಡಿಎ ಅಧಿಕಾರಿಗಳು ತಿಳಿಸಿದ್ದಾರೆ. ಇ-ಕಾಮರ್ಸ್ ಸಂಸ್ಥೆಗಳ ಹೆಸರಿನಲ್ಲಿ ನಡೆಯುತ್ತಿರುವ ನಿಯಮಬಾಹಿರ ಔಷಧ ದಾಸ್ತಾನು ಮತ್ತು ವಿತರಣೆಯನ್ನು ತಡೆಗಟ್ಟಲು ಕಾರ್ಯಾಚರಣೆ ಮುಂದುವರಿಯಲಿದೆ.
ಇದನ್ನೂ ಓದಿ : ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಅಗ್ನಿ ದುರಂತ ; ಸುಟ್ಟು ಕರಕಲಾದ ಬೋಗಿ!


















