ಮುಂಬೈ: ಮುಂಬರುವ ನವರಾತ್ರಿ ಹಬ್ಬದ ಗರ್ಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳಲ್ಲಿ ಯಾವುದೇ ಕಾರಣಕ್ಕೂ ಮುಸ್ಲಿಮರು ಭಾಗವಹಿಸದಂತೆ ನೋಡಿಕೊಳ್ಳುವುದಾಗಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಘೋಷಿಸಿದ್ದು, ಮುಸ್ಲಿಮರನ್ನು ನಿರ್ಬಂಧಿಸಲು ಕರೆ ನೀಡಿದೆ. ಅಕ್ಟೋಬರ್ 11ರಂದು ಆರಂಭವಾಗುವ ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ವಿಹಿಂಪ, ಕಾರ್ಯಕ್ರಮಕ್ಕೆ ಬರುವವರ ಗುರುತಿನ ಚೀಟಿ (ಆಧಾರ್ ಕಾರ್ಡ್) ಪರಿಶೀಲಿಸುವುದು ಹಾಗೂ ಹಣೆಗೆ ತಿಲಕ ಇಡುವುದನ್ನು ಕಡ್ಡಾಯಗೊಳಿಸುವಂತೆ ಆಯೋಜಕರಿಗೆ ಒತ್ತಾಯಿಸಿದೆ.
ಹಿಂದೂ ಸಂಸ್ಕೃತಿ ಉಳಿಸಲು ಕ್ರಮ
ಗರ್ಬಾ ಮತ್ತು ದಾಂಡಿಯಾ ಕೇವಲ ಹಾಡು, ಕುಣಿತವಲ್ಲ; ಅದು ಹಿಂದೂ ದೇವತೆಯ ಆರಾಧನೆ. ವಿಗ್ರಹಾರಾಧನೆಯನ್ನು ವಿರೋಧಿಸುವ ಮುಸ್ಲಿಮರು ಈ ಹಬ್ಬದಲ್ಲಿ ಏಕೆ ಪಾಲ್ಗೊಳ್ಳಬೇಕು ಎಂದು ವಿಎಚ್‌ಪಿ ವಕ್ತಾರ ಶ್ರೀರಾಜ್ ನಾಯರ್ ಪ್ರಶ್ನಿಸಿದ್ದಾರೆ. ಹಿಂದೂ ಹಬ್ಬಗಳ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದೊಂದು ಮುನ್ನೆಚ್ಚರಿಕಾ ಕ್ರಮವೇ ಹೊರತು, ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧದ ನಡೆಯಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಒಂದು ವೇಳೆ ಮುಸ್ಲಿಮರು ಹಬ್ಬದಲ್ಲಿ ಪಾಲ್ಗೊಳ್ಳಲು ಬಯಸಿದರೆ, ಅವರು ತಮ್ಮ ಕುಟುಂಬ ಸಮೇತರಾಗಿ ಬರಲಿ ಅಥವಾ ಮಸೀದಿಗಳ ಬಳಿಯೇ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳಲಿ ಎಂದು ಅವರು ಸಲಹೆ ನೀಡಿದ್ದಾರೆ.
ಆರ್‌ಎಸ್‌ಎಸ್ ಮುಖ್ಯಸ್ಥರ ಹೇಳಿಕೆ ಉಲ್ಲೇಖಿಸಿ ವಿಪಕ್ಷಗಳ ತಿರುಗೇಟು
ವಿಎಚ್‌ಪಿಯ ಈ ನಿಲುವಿಗೆ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ನ್ಯೂಯಾರ್ಕ್‌ನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ‘ಎಲ್ಲಾ ಮನುಷ್ಯರೂ ಸಮಾನರು’ ಎಂದು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿರುವ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್, ವಿಎಚ್‌ಪಿಯು ಆರ್‌ಎಸ್‌ಎಸ್ ನಿಲುವನ್ನು ವಿರೋಧಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಹಬ್ಬಗಳು ಸೌಹಾರ್ದತೆಯ ಸಂಕೇತವಾಗಿವೆ, ಇಂತಹ ನಿರ್ಬಂಧಗಳು ಅಸಾಂವಿಧಾನಿಕ ಎಂದು ಕಾಂಗ್ರೆಸ್ ಶಾಸಕ ಅಮೀನ್ ಪಟೇಲ್ ಕಿಡಿಕಾರಿದ್ದಾರೆ. ಮತ್ತೊಂದೆಡೆ, ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ವಿಎಚ್‌ಪಿ ನಿಯಂತ್ರಿಸಲು ಬಿಜೆಪಿ ಸರ್ಕಾರ ಮೂಕಪ್ರೇಕ್ಷಕನಾಗಿ ಅವಕಾಶ ನೀಡುತ್ತಿದೆಯೇ ಎಂದು ಎನ್‌ಸಿಪಿ (ಎಸ್‌ಪಿ) ವಕ್ತಾರ ಕ್ಲೈಡ್ ಕ್ರಾಸ್ಟೊ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಬ್ಬಗಳು ಬೆಸೆಯುತ್ತವೆ, ಒಡೆಯುವುದಿಲ್ಲ ಎಂದ ಅಲ್ಪಸಂಖ್ಯಾತ ಆಯೋಗ
ವಿಎಚ್‌ಪಿಯ ಈ ಮಾರ್ಗಸೂಚಿಗೆ ಮಹಾರಾಷ್ಟ್ರ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಪ್ಯಾರೆ ಖಾನ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಬ್ಬಗಳು ಜನರನ್ನು ಒಗ್ಗೂಡಿಸುತ್ತವೆಯೇ ಹೊರತು ವಿಭಜಿಸುವುದಿಲ್ಲ. ಅನೇಕ ಸಂಘಟನೆಗಳು ಮುಸ್ಲಿಮರನ್ನು ಪ್ರೀತಿಯಿಂದ ಆಹ್ವಾನಿಸುತ್ತವೆ; ಯಾರೂ ಬಲವಂತವಾಗಿ ಅಲ್ಲಿಗೆ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ. ವಿಎಚ್‌ಪಿಯ ಈ ನಿರ್ಧಾರವು ಸದ್ಯ ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಲ್ಲಿ ಭಾಗವಹಿಸುವಿಕೆ ಹಾಗೂ ಬಹುತ್ವದ ಸಮಾಜದಲ್ಲಿ ಇಂತಹ ನಿರ್ಬಂಧಗಳ ಮಿತಿಯ ಕುರಿತು ಭಾರೀ ಚರ್ಚೆ ಹುಟ್ಟುಹಾಕಿದೆ.


















