ಲೇಹ್: ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತುಗೊಳಿಸಿದ ಬೆನ್ನಲ್ಲೇ ಭಾರತ ಸರ್ಕಾರ ಗಡಿ ಭಾಗದಲ್ಲಿ ತನ್ನ ಜಲ ಭದ್ರತೆಯನ್ನು ಬಲಪಡಿಸಲು ಐತಿಹಾಸಿಕ ಹೆಜ್ಜೆ ಇರಿಸಿದೆ. ಲಡಾಖ್ನ ಲೇಹ್ ಜಿಲ್ಲೆಯ ಉಪ್ಷಿ ಎಂಬಲ್ಲಿ ಸಿಂಧೂ ನದಿಗೆ ಅಡ್ಡಲಾಗಿ ದೇಶದ ಮೊದಲ ‘ರಾಕ್ ಚೆಕ್ ಡ್ಯಾಮ್’ (ನೈಸರ್ಗಿಕ ಕಲ್ಲಿನ ಆಣೆಕಟ್ಟು) ನಿರ್ಮಿಸುವ ಮೂಲಕ ಗಡಿ ಪ್ರದೇಶದ ಕೃಷಿಕರಿಗೆ ಹೊಸ ಆಶಾಕಿರಣ ಮೂಡಿಸಲಾಗಿದೆ.
ಸಿಮೆಂಟ್ ಬಳಸದೆ ನಿರ್ಮಾಣಗೊಂಡ ಬೃಹತ್ ಆಣೆಕಟ್ಟು
ಈ ಯೋಜನೆಯ ವಿಶೇಷತೆಯೆಂದರೆ ಸಂಪೂರ್ಣವಾಗಿ ನೈಸರ್ಗಿಕ ಬಂಡೆಕಲ್ಲುಗಳನ್ನು ಬಳಸಿ, ಯಾವುದೇ ಸಿಮೆಂಟ್ ಸಹಾಯವಿಲ್ಲದೆ ಈ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಸಿಂಧೂ ನದಿಯ ನೀರಿನ ಮಟ್ಟವು ಸುಮಾರು 10 ಅಡಿಗಳಷ್ಟು ಎತ್ತರಕ್ಕೇರಿದೆ. ಪರಿಣಾಮವಾಗಿ, ನದಿಯ ನೀರನ್ನು ‘ಇಗೂ ಫೇ’ ನೀರಾವರಿ ಕಾಲುವೆಗೆ ಯಶಸ್ವಿಯಾಗಿ ಹರಿಸಲಾಗುತ್ತಿದ್ದು, ಸುಮಾರು 40 ಮಿಲಿಯನ್ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
ರೈತರ ಸುದೀರ್ಘ ಕೃಷಿ ಸಂಕಷ್ಟಕ್ಕೆ ಮುಕ್ತಿ
ಪ್ರತಿವರ್ಷ ವಸಂತ ಕಾಲದ ಬಿತ್ತನೆ ಸಮಯದಲ್ಲಿ ಸಿಂಧೂ ನದಿಯು ಆಳವಾದ ಕಂದಕಗಳಲ್ಲಿ ಹರಿಯುತ್ತಿದ್ದರಿಂದ, ಪಂಪ್ಸೆಟ್ಗಳ ಮೂಲಕ ನೀರೆತ್ತಲು ಸಾಧ್ಯವಾಗದೆ ಲಡಾಖ್ನ ಕೃಷಿ ಭೂಮಿಗಳು ಒಣಗಿಹೋಗುತ್ತಿದ್ದವು. ನದಿ ನೀರು ಬಳಸುವ ಮೇಲಿನ ನಿರ್ಬಂಧಗಳು ಮತ್ತು ತೀವ್ರ ನೀರಾವರಿ ಕೊರತೆಯು ಸ್ಥಳೀಯ ರೈತರನ್ನು ಆರ್ಥಿಕವಾಗಿ ಜರ್ಜರಿತಗೊಳಿಸಿತ್ತು. ಆದರೆ ಈ ನೂತನ ರಾಕ್ ಡ್ಯಾಮ್ನಿಂದಾಗಿ ಒಣಗಿದ್ದ ಹಳ್ಳಿಗಳ ಕೃಷಿ ಭೂಮಿಗೆ ನೀರು ತಲುಪಲಿದ್ದು, ಸ್ಥಳೀಯ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಪಾಕಿಸ್ತಾನಕ್ಕೆ ಖಡಕ್ ತಂತ್ರಗಾರಿಕೆಯ ಸಂದೇಶ
ಈ ಯೋಜನೆಯು ಕೇವಲ ಸ್ಥಳೀಯ ನೀರಾವರಿ ಉದ್ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಹಾಗೂ ತಂತ್ರಗಾರಿಕೆಯ ಬಲವಾದ ಸಂದೇಶವನ್ನೂ ರವಾನಿಸಿದೆ. ಸಿಂಧೂ ನೀರು ಪಾಕಿಸ್ತಾನಕ್ಕೆ ಹರಿದು ಹೋಗುವ ಮುನ್ನವೇ, ಗಡಿ ಪ್ರದೇಶದಲ್ಲಿರುವ ತನ್ನದೇ ನಾಗರಿಕರ ಬಳಕೆಗಾಗಿ ಭಾರತವು ಮೂಲಸೌಕರ್ಯಗಳನ್ನು ಸಕ್ರಿಯವಾಗಿ ನಿರ್ಮಿಸುತ್ತಿದೆ ಎಂಬುದಕ್ಕೆ ಈ ಯೋಜನೆ ಪ್ರತ್ಯಕ್ಷ ಸಾಕ್ಷಿಯಾಗಿದೆ.
36 ಹೊಸ ಚೆಕ್ ಡ್ಯಾಮ್ಗಳಿಗೆ ಸರ್ಕಾರ ಬೃಹತ್ ಯೋಜನೆ
ಉಪ್ಷಿ ಯೋಜನೆಯ ಅಭೂತಪೂರ್ವ ಯಶಸ್ಸಿನ ನಂತರ, ಲಡಾಖ್ ಆಡಳಿತವು ಕೇಂದ್ರಾಡಳಿತ ಪ್ರದೇಶದಲ್ಲಿ ಜಲ ಭದ್ರತೆಯನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. 56 ಕೋಟಿ ರೂಪಾಯಿಗೂ ಹೆಚ್ಚಿನ ವೆಚ್ಚದಲ್ಲಿ ಲೇಹ್ ಪ್ರದೇಶದಲ್ಲಿ 7 ಹಿಮಾಲಯನ್ ರಾಕ್ ಚೆಕ್ ಡ್ಯಾಮ್ಗಳು ಹಾಗೂ ಕಾರ್ಗಿಲ್ ಪ್ರದೇಶದಲ್ಲಿ 29 ಚೆಕ್ ಡ್ಯಾಮ್ಗಳು ಸೇರಿದಂತೆ ಒಟ್ಟು 36 ಯೋಜನೆಗಳ ನಿರ್ಮಾಣಕ್ಕೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಪ್ರಸ್ತಾಪವನ್ನು ಸಲ್ಲಿಸಲಾಗಿದೆ.



















