ತ್ರಿಶೂರ್ (ಕೇರಳ): ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಮಿಳುನಾಡಿನ ಎಂಟು ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ನಡೆದಿದೆ. ಶುಕ್ರವಾರ ತಡರಾತ್ರಿ 11.40ರ ಸುಮಾರಿಗೆ ಕೈಪಮಂಗಲಂ ಬಳಿಯ ಪನಂಬಿಕ್ಕುನ್ನು ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ.
ಬೇಜವಾಬ್ದಾರಿ ಪಾರ್ಕಿಂಗ್
ದಿಂಡಿಗಲ್‌ನ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಗಳು ಗುರುವಾಪೂರ್‌ನಿಂದ ಕೊಡುಂಗಲ್ಲೂರ್ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ಕಾರಣ ಟ್ರಾಫಿಕ್ ಡೈವರ್ಷನ್ ಮಾಡಲಾಗಿತ್ತು. ಈ ಡೈವರ್ಷನ್(ಪಥ ಬದಲಾವಣೆ) ಜಾಗದ ಬಲಬದಿಯಲ್ಲಿ ಮಹಾರಾಷ್ಟ್ರ ನೋಂದಣಿಯ ಲಾರಿಯೊಂದನ್ನು ಅಕ್ರಮವಾಗಿ ಪಾರ್ಕ್ ಮಾಡಲಾಗಿತ್ತು. ವೇಗವಾಗಿ ಬಂದ ಕಾರಿನ ಚಾಲಕನಿಗೆ ಡೈವರ್ಷನ್ ಬ್ಯಾರಿಕೇಡ್ ಹಾಗೂ ಲಾರಿ ಗಮನಕ್ಕೆ ಬಾರದೇ ನೇರವಾಗಿ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಆಸ್ಪತ್ರೆ ತಲುಪುವಷ್ಟರಲ್ಲಿ ಕೊನೆಯುಸಿರೆಳೆದ ಯುವಕರು
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, 6 ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಸ್ಥಳೀಯರು, ಅಗ್ನಿಶಾಮಕ ದಳ ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತರ ಪೈಕಿ 6 ಜನರನ್ನು ಸೂರ್ಯ, ಯುವಸಂಜಿತ್, ವಿಶ್ವ, ಜೊಶುವಾ, ಸಂತೋಷ್ ಹಾಗೂ ಪ್ರಸನ್ನ ಎಂದು ಗುರುತಿಸಲಾಗಿದ್ದು, ಉಳಿದ ಇಬ್ಬರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾರಿ ಚಾಲಕ ಪರಾರಿ
ಅಪಘಾತ ಸಂಭವಿಸಿದ ತಕ್ಷಣ ಲಾರಿ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದು, ಕೈಪಮಂಗಲಂ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 105ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಬಳಿಯಿದ್ದ ಗುರುತಿನ ಚೀಟಿಗಳ ಆಧಾರದ ಮೇಲೆ ತಮಿಳುನಾಡಿನಲ್ಲಿರುವ ಅವರ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಪೋಷಕರು ತ್ರಿಶೂರ್‌ಗೆ ಆಗಮಿಸಿದ ನಂತರ ಮರಣೋತ್ತರ ಪರೀಕ್ಷೆ ನಡೆಯಲಿದೆ.



















